ಹೈದರಾಬಾದ್: ತೆಲಂಗಾಣ ಸಿಎಂ ಕೆಸಿಆರ್ ಹೊಸ ರಾಷ್ಟ್ರೀಯ ರಾಜಕೀಯ ಪಕ್ಷ ಕಟ್ಟಲು ಸಿದ್ಧತೆ ನಡೆಸಿದ್ದಾರೆ ಎಂದು ಮಾಹಿತಿ. ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್ಎಸ್) ಹೆಸರಿನತ್ತ ವಾಲಿದ್ದು, ಶೀಘ್ರದಲ್ಲಿಯೇ ಹೆಸರು ನೋಂದಣಿಯಾಗಲಿದೆ ಎಂದು ತಿಳಿದು ಬಂದಿದೆ. ಈ ತಿಂಗಳ ಕೊನೆಯಲ್ಲಿ ದೆಹಲಿಯಲ್ಲಿ ಕೆಸಿಆರ್ ಅವರು ಹೊಸ ಪಕ್ಷವನ್ನು ಘೋಷಿಸಲಿದ್ದಾರೆ. ಅವರು ಪಕ್ಷಕ್ಕೆ ಕಾರಿನ ಚಿಹ್ನೆ ಇರಬಹುದೆಂದು ಪಕ್ಷದ ಮೂಲಗಳು ತಿಳಿಸಿವೆ.
ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ಗೆ ಪರ್ಯಾಯವಾಗಿ ಹೊಸ ಪಕ್ಷದ ರಚನೆ, ಮುಂಬರುವ ರಾಷ್ಟ್ರಪತಿ ಚುನಾವಣೆ, ವಿಧಾನಸಭೆಯ ಮುಂಗಾರು ಅಧಿವೇಶನ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಮುಖ್ಯಮಂತ್ರಿ ಶುಕ್ರವಾರ ಪ್ರಗತಿ ಭವನದಲ್ಲಿ ತುರ್ತು ಸಭೆ ನಡೆಸಿದರು. ಈ ಸಭೆಯಲ್ಲಿ ಇದೇ ತಿಂಗಳ 19ರಂದು ನಡೆಯಲಿರುವ ಟಿಆರ್‌ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೊಸ ಪಕ್ಷ ರಚನೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಸಿಆರ್ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ಗುಡುಗಿದ ಕೆಸಿಆರ್:ಬಿಜೆಪಿ ದೌರ್ಜನ್ಯ ಹೆಚ್ಚಿದೆ. ವಿರೋಧ ಪಕ್ಷದಲ್ಲೂ ಕಾಂಗ್ರೆಸ್ ಸೋತಿರುವುದರಿಂದ ದೇಶದ ಜನತೆ ಪರ್ಯಾಯ ರಾಜಕೀಯ ಶಕ್ತಿಗಾಗಿ ಕಾಯುತ್ತಿದ್ದಾರೆ. ಹೊಸ ಪಕ್ಷ ಈ ಪಾತ್ರ ನಿರ್ವಹಿಸಲಿದೆ ಎಂದು ತೆಲಂಗಾಣ ಸಿಎಂ ಕೆಸಿಆರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಸೃಷ್ಟಿಗೆ ರಾಷ್ಟ್ರಪತಿ ಚುನಾವಣೆ ವೇದಿಕೆಯಾಗಬೇಕು. ವಿವಿಧ ಪಕ್ಷಗಳನ್ನು ಒಗ್ಗೂಡಿಸಿ ಎನ್‌ಡಿಎ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಲು ಇದು ಸೂಕ್ತ ಸಮಯ. ಈ ತಂತ್ರದ ಅನುಷ್ಠಾನದ ಭಾಗವಾಗಿ ಟಿಆರ್‌ಎಸ್ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಸಕ್ರಿಯವಾಗಲಿದೆ ಎಂದು ಕೆಸಿಆರ್ ಹೇಳಿದ್ದಾರೆ ಎನ್ನಲಾಗಿದೆ.