ಹೈದರಾಬಾದ್(ತೆಲಂಗಾಣ):ರಾಷ್ಟ್ರ ರಾಜಕಾರಣ ಮೇಲೆ ಕಣ್ಣಿಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ನಾಳೆ ತಮ್ಮ ರಾಷ್ಟ್ರೀಯ ಪಕ್ಷವನ್ನು ಘೋಷಿಸಲಿದ್ದಾರೆ. ಇದಕ್ಕಾಗಿ ಮುಹೂರ್ತ ಕೂಡ ನಿಗದಿಪಡಿಸಲಾಗಿದೆ.
ನಾಳೆ ತೆಲಂಗಾಣ ಭವನದಲ್ಲಿ ಪಕ್ಷದ ಸಭೆ ನಡೆಯಲಿದ್ದು, ದಸರಾ ಹಬ್ಬದ ದಿನದಂದೇ ಪಕ್ಷದ ಹೆಸರನ್ನು ಬಹಿರಂಗಪಡಿಸಲಿದ್ದಾರೆ. ಮೂಲಗಳ ಪ್ರಕಾರ ಬುಧವಾರ ಮಧ್ಯಾಹ್ನ 1.19 ಕ್ಕೆ ಪಕ್ಷವನ್ನು ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ನಾಯಕರ ಜೊತೆ ಸಭೆ ನಡೆಸಿದ ಬಳಿಕ ಕೆಸಿಆರ್ ಅವರು ರಾಷ್ಟ್ರ ರಾಜಕಾರಣದ ಬಗೆಗಿನ ತಮ್ಮ ನಿಲುವನ್ನು ತಿಳಿಸಲಿದ್ದಾರೆ. ಪಕ್ಷದ ಹೆಸರನ್ನು ಬದಲಾಯಿಸಲು ಟಿಆರ್‌ಎಸ್ ನಾಯಕರ ನಿಯೋಗ ದೆಹಲಿಗೆ ತೆರಳಲಿದೆ. ಅಕ್ಟೋಬರ್ 9 ರಂದು ದೆಹಲಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಕೆ ಸಿ ಚಂದ್ರಶೇಖರ್ ಮಾತನಾಡಲಿದ್ದಾರೆ ಎಂದು ಪಕ್ಷ ತಿಳಿಸಿದೆ.
ಟಿಆರ್‌ಎಸ್ ಬದಲಿಸಿ ಬಿಆರ್ಎಸ್ ಮಾಡ್ತಾರಾ:ನಾಳೆ ಟಿಆರ್‌ಎಸ್ ಶಾಸಕಾಂಗ ಪಕ್ಷ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯ ಬಳಿಕ ಪಕ್ಷ ಘೋಷಣೆ ಮಾಡಲಿದ್ದು, ತೆಲಂಗಾಣಕ್ಕೆ ಸೀಮಿತವಾಗಿರುವ ಟಿಆರ್‌ಎಸ್ ಅನ್ನು ರಾಷ್ಟ್ರವ್ಯಾಪಿ ಮಾಡಲು ಭಾರತೀಯ ರಾಷ್ಟ್ರ ಸಮಿತಿ(ಬಿಆರ್ಎಸ್) ಎಂದು ನಾಮಕರಣ ಮಾಡುವ ಸಾಧ್ಯತೆ ಇದೆ. ಟಿಆರ್‌ಎಸ್ ಪಕ್ಷಕ್ಕೆ ಮರುನಾಮಕರಣ ಮಾಡುವ ನಿರ್ಣಯವನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು. ತಮ್ಮ ಹೊಸ ಪಕ್ಷಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಲು ಕೋರಲಾಗುತ್ತದೆ.
ಬದಲಾಗುತ್ತಾ ಪಕ್ಷದ ಗುರುತು:ರಾಷ್ಟ್ರೀಯ ಪಕ್ಷದ ಘೋಷಣೆಯ ಬಳಿಕ ಈಗಿರುವ ಟಿಆರ್ಎಸ್ನ ಚಿಹ್ನೆಯಾದ ಅಂಬಾಸಿಡರ್ ಕಾರು ಮತ್ತು ಅದರ ಗುಲಾಬಿ ಬಣ್ಣದ ಧ್ವಜವನ್ನೇ ಉಳಿಸಿಕೊಳ್ಳಲು ಪಕ್ಷ ಬಯಸಿದೆ ಎಂದು ಹೇಳಲಾಗಿದೆ. ಅಧಿಕೃತವಾಗಿ ರಾಷ್ಟ್ರೀಯ ಪಕ್ಷವಾಗಲು ಇನ್ನೂ ಸಮಯಾವಕಾಶ ಬೇಕಾದ ಕಾರಣ, ಇದೇ ಚಿಹ್ನೆಯಲ್ಲೇ ಸದ್ಯಕ್ಕೆ ಮುಂದುವರಿಯುವ ಸಾಧ್ಯತೆ ಇದೆ.
ರಾಷ್ಟ್ರೀಯ ಪಕ್ಷದ ಘೋಷಣೆ ಬಳಿಕ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸುವ ಇರಾದೆ ಹೊಂದಿದೆ.
ಓದಿ:ಪಂಜಾಬ್ ರಸ್ತೆ ಅಪಘಾತ ಮೃತಪಟ್ಟ ಯೋಧ ಶಿವರಾಜ್ ಅಂತ್ಯಕ್ರಿಯೆ