ಹೈದರಾಬಾದ್:ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು 'ಬಿಹಾರಿ ಡಿಎನ್ಎ' ಹೊಂದಿದ್ದಾರೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ರೇವಂತ್ ರೆಡ್ಡಿ ನೀಡಿರುವ ಹೇಳಿಕೆ ಹೊಸ ವಿವಾದವನ್ನು ಸೃಷ್ಟಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ತಮ್ಮ ಆಡಳಿತದಲ್ಲಿ ಬಿಹಾರಿ ಅಧಿಕಾರಿಗಳನ್ನೇ ಕೆಸಿಆರ್ ನೇಮಿಸಿಕೊಂಡಿದ್ದಾರೆ ಎಂದೂ ರೇವಂತ್ ರೆಡ್ಡಿ ಟೀಕಿಸಿದ್ದಾರೆ.
ಇತ್ತೀಚಿಗೆ ಪಂಜಾಬ್ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚೆನ್ನಿ ಅವರು 'ಉತ್ತರ ಪ್ರದೇಶ, ಬಿಹಾರ, ದೆಹಲಿಯ ಭಯ್ಯಾಸ್ (ಅಣ್ಣಂದಿರು) ಪಂಜಾಬ್ ಗೆ ಬರಲು ಸಾಧ್ಯವಿಲ್ಲ ಹಾಗೂ ಅವರು ಯಾವತ್ತೂ ನಮ್ಮ ರಾಜ್ಯವನ್ನು ಆಳುವುದಿಲ್ಲ' ಎಂದು ಹೇಳಿಕೆ ನೀಡಿದ್ದರು. ಇದೀಗ ಇದೇ ದಾಟಿಯಲ್ಲಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ತೆಲಂಗಾಣಕ್ಕೆ ಚುನಾವಣಾ ಚತರು ಖ್ಯಾತಿಯ ಬಿಹಾರ ಮೂಲದ ಪ್ರಶಾಂತ್ ಕಿಶೋರ್ ಎಂಟ್ರಿ ಕೊಟ್ಟಿರುವ ಬೆನ್ನಲ್ಲೆ ಈ ರೀತಿಯ ಹೇಳಿಕೆ ಕೊಟ್ಟಿರುವುದು ಗಮನರ್ಹ.
'ಕೆಸಿಆರ್ ಅವರ ಪುರ್ವಜರು ಬಿಹಾರ ಮೂಲದವರಾಗಿದ್ದಾರೆ. ನಂತರ ಅವರು ತೆಲಂಗಾಣಕ್ಕೆ ವಲಸೆ ಬಂದಿದ್ದಾರೆ. ಇದನ್ನು 2008ರಲ್ಲಿ ನೀಡಿದ್ದ ಟಿವಿ ಸಂದರ್ಶನದಲ್ಲಿ ಸ್ವತಃ ಕೆಸಿಆರ್ ಅವರೇ ಒಪ್ಪಿಕೊಂಡಿದ್ದಾರೆ. ಚುನಾವಣೆ ಗೆಲ್ಲಲು ಕೆಸಿಆರ್ ಸಮಾಜ ಕಲ್ಯಾಣ ಯೋಜನೆಗಳನ್ನು ಬಳಸುತ್ತಿದ್ದರು. ಆದರೆ, ಈಗ ಪ್ರಶಾಂತ್ ಕಿಶೋರ್ ಅವರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ' ಎಂದು ರೇವಂತ್ ರೆಡ್ಡಿ ಲೇವಡಿ ಮಾಡಿದ್ದಾರೆ.