ತೆಲಂಗಾಣ :ಮೇದಕ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನರಸಿಂಗಿ ಮಂಡಲ ವಳ್ಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ ಬ್ಲಾಸ್ಟ್ ಆಗಿ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ಗೆ ಗುದ್ದಿದೆ. ಬಳಿಕ ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖಂಡ ತೌರ್ಯ ನಾಯಕ್ ಹಾಗೂ ಅವರ ಪುತ್ರ ಅಂಕಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಕ್ರೇನ್ ಸಹಾಯದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ರಾಮಾಯಣಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
ತೌರ್ಯ ನಾಯ್ಕ್ ಈ ಹಿಂದೆ ಬಿಆರ್‌ಎಸ್ ಪಕ್ಷದ ನರಸಿಂಗಿ ಮಂಡಲದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅದೇ ರೀತಿ, ಮೂಲ ಕೃಷಿ ಸಹಕಾರ ಸಂಘದ (ಪಿಎಸಿಎಸ್) ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾರಿನ ಟಯರ್ ಸ್ಫೋಟಗೊಂಡಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಂಗ್ಲಾದೇಶ ರಸ್ತೆ ಅಪಘಾತ : ಶನಿವಾರ ಬಾಂಗ್ಲಾದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಕೆರೆಗೆ ಉರುಳಿದೆ. ಘಟನೆಯಿಂದ ಮೂವರು ಮಕ್ಕಳು ಸೇರಿದಂತೆ 17 ಮಂದಿ ಸಾವನ್ನಪ್ಪಿದ್ದಾರೆ. 35ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 60ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್ ಇದಾಗಿದ್ದು, ಭಂಡಾರಿಯಾ ಉಪಜಿಲ್ಲೆಯಿಂದ ನೈಋತ್ಯ ವಿಭಾಗೀಯ ಕೇಂದ್ರ ಕಚೇರಿಯ ಬಾರಿಶಾಲ್‌ಗೆ ತೆರಳುತ್ತಿದ್ದಾಗ ಝಳಕತಿ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.