ವರಂಗಲ್ (ತೆಲಂಗಾಣ):ಹಿಂದಿ ಎಸ್‌ಎಸ್‌ಸಿ(ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್) ಪೇಪರ್ ಸೋರಿಕೆ ಪ್ರಕರಣದಲ್ಲಿ ಬಂಧಿನಕ್ಕೊಳಗಾಗಿದ್ದ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಅವರನ್ನು ಕರೀಂ ನಗರ ಜಿಲ್ಲಾ ಕಾರಾಗೃಹದಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಬಳಿಕ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು
ಸಂಜಯ್ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ ಎಂದು ಬಂಡಿ ಸಂಜಯ್ ಪರ ವಕೀಲ ಶ್ಯಾಮ್ ಸುಂದರ್ ರೆಡ್ಡಿ ತಿಳಿಸಿದ್ದಾರೆ. "ಕೋರ್ಟ್ ನಮ್ಮ ಮನವಿ ಸ್ವೀಕರಿಸಿ ಬಂಡಿ ಸಂಜಯ್‌ಗೆ ಜಾಮೀನು ನೀಡಿದೆ. 20 ಸಾವಿರ ರೂ. ಶ್ಯೂರಿಟಿ ಒದಗಿಸಿದ ನಂತರ ಇಂದು ಬೆಳಗ್ಗೆ ಅವರನ್ನು ಕರೀಂ ನಗರ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಜತೆಗೆ ಅನುಮತಿ ಇಲ್ಲದೇ ಭಾರತವನ್ನು ತೊರೆಯುವಂತಿಲ್ಲ ಎಂದು ನ್ಯಾಯಾಲಯವು ಷರತ್ತು ವಿಧಿಸಿದೆ" ಎಂದು ಅವರು ತಿಳಿಸಿದರು.
ಬುಧವಾರದಂದು ಎಸ್‌ಎಸ್‌ಸಿ ಪೇಪರ್ ಸೋರಿಕೆ ಪ್ರಕರಣದಲ್ಲಿ ಬಂಡಿ ಸಂಜಯ್ ಮತ್ತು ಇತರ ಮೂವರನ್ನು ಏಪ್ರಿಲ್ 19 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಗೆ ಮುನ್ನ ಬಂಡಿ ಸಂಜಯ್ ಕುಮಾರ್ ಅವರನ್ನು ಕರೀಂ ನಗರದಲ್ಲಿರುವ ಅವರ ನಿವಾಸದಿಂದ ಬುಧವಾರ (ಏ.5) ಮಧ್ಯರಾತ್ರಿ ಬಂಧಿಸಲಾಗಿತ್ತು.
ವರದಿಯ ಪ್ರಕಾರ "ಪೊಲೀಸರ ತಂಡ ಕರೀಂ ನಗರದಲ್ಲಿರುವ ನಿವಾಸಕ್ಕೆ ತಲುಪಿದಾಗ ಸಂಜಯ್ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಪೊಲೀಸರನ್ನು ತಡೆಯಲು ಪ್ರಯತ್ನಿಸಿದ್ದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ಮೊದಲು ಪೊಲೀಸರು ಬಿಜೆಪಿ ಮುಖಂಡ ಬಂಡಿ ಸಂಜಯ್ ಕುಮಾರ್ ವಿರುದ್ಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.