ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆಯ ಕಾಮರೆಡ್ಡಿ ಕ್ಷೇತ್ರದಲ್ಲಿ ಅಚ್ಚರಿ ಫಲಿತಾಂಶವೊಂದು ಹೊರ ಬಂದಿದೆ. ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಿಎಂ ಚಂದ್ರಶೇಖರ್ ರಾವ್ ಹಾಗೂ ಕಾಂಗ್ರೆಸ್ನ ಸಿಎಂ ಹುದ್ದೆಯ ಆಕಾಂಕ್ಷಿ, ಪಕ್ಷದ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿಯ ಅಭ್ಯರ್ಥಿ ವೆಂಕಟರಮಣ ರೆಡ್ಡಿ ಗೆಲುವು ಸಾಧಿಸಿದ್ದಾರೆ.
ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಯ ಚುನಾವಣಾ ಫಲಿತಾಂಶ ಬಹುತೇಕ ಹೊರಬಂದಿದೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಆರ್ಎಸ್ ಸೋಲಿನ ಸುಳಿಗೆ ಸಿಲುಕಿದೆ. ಪ್ರತಿಪಕ್ಷ ಕಾಂಗ್ರೆಸ್ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರಚನೆಯಾದ ಬಳಿಕ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮ್ಯಾಜಿಕ್ ನಂಬರ್ 60 ಆಗಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಕಾಂಗ್ರೆಸ್ 64 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಬಿಆರ್ಎಸ್ 39 ಸ್ಥಾನಗಳಿಗೆ ಕುಸಿದಿದೆ. ಬಿಜೆಪಿ 8 ಕಡೆ ಹಾಗೂ ಎಐಎಂಐಎಂ 7 ಕ್ಷೇತ್ರಗಳು ಹಾಗೂ ಒಂದು ಕಡೆ ಸಿಪಿಐ ಮುನ್ನಡೆಯಲ್ಲಿದೆ.
ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಿಎಂ ಕೆಸಿಆರ್ ಹಾಗೂ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರೇವಂತ್ ರೆಡ್ಡಿ ಸ್ಪರ್ಧೆಯಿಂದ ಹೆಚ್ಚು ಮಹತ್ವ ಪಡೆದಿದೆ. ಇಬ್ಬರು ಉನ್ನತ ನಾಯಕರ ವಿರುದ್ಧ ಬಿಜೆಪಿಯಿಂದ ವೆಂಕಟರಮಣ ರೆಡ್ಡಿ ಕಣಕ್ಕೆ ಇಳಿದಿದ್ದರು. ಇದುವರೆಗೆ ರೇವಂತ್ ರೆಡ್ಡಿ ಮುನ್ನಡೆಯಲ್ಲಿದ್ದರು.