ಹೈದರಾಬಾದ್:ತ್ವರಿತ ವೈಯಕ್ತಿಕ ಸಾಲ ಆ್ಯಪ್‌ಗಳ ಮೂಲಕ ವಂಚನೆ ಮಾಡುತ್ತಿದ್ದ ಪ್ರಕರಣ ಭೇದಿಸಿದ ಸೈಬರಾಬಾದ್ ಸೈಬರ್ ಅಪರಾಧ ವಿಭಾಗದ ಪೊಲೀಸರು 6 ಮಂದಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಆ್ಯಪ್‌ಗಳನ್ನು ಕ್ಯಾಶ್ ಮಾಮಾ, ಲೋನ್ ಝೋನ್ ಮತ್ತು ಧನಾಧನ್ ಎಂದು ಗುರುತಿಸಲಾಗಿದೆ.
ಕ್ಯಾಶ್ ಮಾಮಾ, ಲೋನ್ ಝೋನ್ ಆ್ಯಪ್‌ಗಳು 9 ಬ್ಯಾಂಕೇತರ ಹಣಕಾಸು ಕಂಪನಿಗಳ ಜೊತೆ ಒಡನಾಟ ಹೊಂದಿದ್ದು, ಧನಾಧನ್ಗೆ ಯಾವುದೇ ಕಂಪನಿಗಳ ಅನುಮೋದನೆ ಇರಲಿಲ್ಲ. ಕೊಕಪೇಟೆಯ ಆನಿಯನ್ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್ ಮತ್ತು ಕ್ರೆಡಿಟ್ ಫಾಕ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ನಿರ್ದೇಶಕ ಕೊನಾತಹಮ್ ಶರತ್ ಚಂದ್ರ, ನಿರ್ದೇಶಕಿ ಪುಷ್ಪಲತಾ, ಬಿ.ವಾಸವ ಚೈತನ್ಯ, ಚಿಲ್ಕಗೂಡದ ಕಲೆಕ್ಷನ್ ಏಜೆಂಟ್ ಬಿ.ವೆಂಕಟೇಶ್, ಶಿಲ್ಪರಾಮನ್ ಸಚಿನ್ ದೇಶ್ ಮುಖ್, ಸಯ್ಯದ್ ಆಶಿಕ್ರನ್ನು ಪೊಲೀಸರು ಬಂಧಿಸಿದ್ದಾರೆ.
ಹಣಕಾಸಿನ ಅವಶ್ಯತೆ ಹಿನ್ನೆಲೆಯಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ವ್ಯಕ್ತಿವೋರ್ವ ಜನವರಿ 8ರಂದು "ಕ್ಯಾಶ್ ಮಾಮಾ" ಎಂಬ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾನೆ. ಬಳಿಕ ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಫೋಟೋ, 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಇತ್ಯಾದಿಗಳನ್ನು ಅಪ್‌ಲೋಡ್ ಮಾಡಿದ್ದಾನೆ. ಅದರ ಆಧಾರದ ಮೇಲೆ 7 ದಿನಗಳ ಅವಧಿಗೆ 5,000 ರೂ. ಸಾಲವನ್ನು ಜಿಎಸ್‌ಟಿ ಮತ್ತು ಸಂಸ್ಕರಣಾ ಶುಲ್ಕಕ್ಕೆ 1,180 ರೂ.ಗಳನ್ನು ಕಡಿತಗೊಳಿಸಿ 3,820 ರೂ. ತನ್ನ ಎಸ್‌ಬಿಐ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ. ಅದೇ ರೀತಿ "ಕ್ಯಾಶ್ ಮಾಮಾ" ಮೂಲಕ 6 ಬಾರಿ ಸಾಲ ತೆಗೆದುಕೊಂಡಿದ್ದಾಗಿ ದೂರಿನಲ್ಲಿ ಆತ ತಿಳಿಸಿದ್ದಾನೆ.