ಕೌಶಾಂಬಿ (ಉತ್ತರಪ್ರದೇಶ): ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಕೃತ್ಯದಿಂದ ಮನನೊಂದ ಅಪ್ರಾಪ್ತೆಯೊಬ್ಬರು ಕೈ ಮೇಲೆ ಆರೋಪಿಯ ಹೆಸರು ಬರೆದು, ತದನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಬ್ಲ್ಯಾಕ್ ಮೇಲ್ನಿಂದ ಆತಂಕಕ್ಕೊಳಗಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕಿ ಜೊತೆ ಪ್ರೀತಿಯ ನಾಟಕವಾಡಿರುವ ಯುವಕ, ತದನಂತರ ದೈಹಿಕ ಸಂಪರ್ಕ ಬೆಳೆಸಿ, ಅದರ ವಿಡಿಯೋ ಸೆರೆ ಹಿಡಿದಿದ್ದಾನೆ. ಇದಾದ ಬಳಿಕ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮುಂಚಿತವಾಗಿ ತನ್ನ ಕೈ ಮೇಲೆ ಆರೋಪಿ ಹೆಸರು ಬರೆದುಕೊಂಡಿದ್ದಳು. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಾಲಕಿಗೆ ಕಿರುಕುಳ ನೀಡಿರುವ ಯುವಕ.. ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಬಾಲಕಿಯ ಅಶ್ಲೀಲ ವಿಡಿಯೋ ಸೆರೆ ಹಿಡಿದಿರುವ ಯುವಕ, ಬಾಲಕಿಗೆ ಮೇಲಿಂದ ಮೇಲೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದರಿಂದ ಮನನೊಂದು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವಿನ ಕದ ತಟ್ಟಿದ್ದಾರೆ. ಬಾಲಕಿ ನೇಣು ಹಾಕಿಕೊಂಡಿರುವುದನ್ನ ಪಕ್ಕದ ಮನೆಯವರು ನೋಡಿದ್ದು, ತಕ್ಷಣವೇ ಅವಳನ್ನು ಆಸ್ಪತ್ರೆಗೆ ದಾಖಲು ಮಾಡುವ ಕೆಲಸ ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಪುಣ್ಯ ಕ್ಷೇತ್ರಗಳಲ್ಲಿ ಯುವತಿಯರ ರೀಲ್.. ಪುರೋಹಿತ್, ಬ್ರಾಹ್ಮಣ ಸಭಾದಿಂದ ಆಕ್ಷೇಪ
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಲಕಿಯ ತಾಯಿ ಮಾತನಾಡಿದ್ದು, ನನಗೆ ಐವರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಆರೋಪಿ ನನ್ನ ಅಪ್ರಾಪ್ತ ಮಗಳನ್ನ ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಮೋಸ ಮಾಡಿದ್ದು, ಆಶ್ಲೀಲ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಘಟನೆ ಬಗ್ಗೆ ನನ್ನ ಮುಂದೆ ಹೇಳಿಕೊಂಡಿದ್ದಳು. ಹೀಗಾಗಿ, ಅವಳನ್ನ ಬೇರೆ ಊರಿಗೆ ಕಳುಹಿಸಿಕೊಟ್ಟಿದ್ದೆ. ಅಷ್ಟಾದರೂ ಆತ, ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದನು. ಹೀಗಾಗಿ, ಮನೆಗೆ ವಾಪಸ್ ಆಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಾಲಕಿ ತಾಯಿ ಆರೋಪಿಸಿದ್ದಾರೆ.