ಪಿಲಿಭಿತ್(ಉತ್ತರ ಪ್ರದೇಶ):ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಕಾಮುಕರು ಸಜೀವ ದಹನ ಮಾಡಿರುವ ಘಟನೆ ನಡೆದಿದೆ. ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಾಧೋಟಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಯುವತಿಯ ಮೇಲೆ ಸೆ.7ರಂದು ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದರು. ಬಳಿಕ ಆಕೆಯನ್ನು ಸಜೀವ ದಹನ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದರು. ಈ ಘಟನೆಯ ವಿಡಿಯೋ ಸೆಪ್ಟೆಂಬರ್ 10ರಂದು ವೈರಲ್ ಆಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ ನೀಡಿರುವ ದೂರಿನ ಮೇರೆಗೆ ಪೊಲೀಸರು ಆರೋಪಿಗಳಿಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಬಂಧನ ಮಾಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಬಾಲಕಿ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ವೈದ್ಯರು ಹೆಚ್ಚಿನ ಚಿಕಿತ್ಸೆಗೋಸ್ಕರ ಲಖನೌಗೆ ಕಳುಹಿಸಿದ್ದರು. ಆದರೆ, ಇಂದು ಬೆಳಗ್ಗೆ 3 ಗಂಟೆಗೆ ಕೊನೆಯುಸಿರೆಳೆದಿದ್ದಾಗಿ ತಿಳಿದು ಬಂದಿದೆ.
ಇದನ್ನೂ ಓದಿ:ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಶವ ಪತ್ತೆ; ಅತ್ಯಾಚಾರವೆಸಗಿ ಕೊಲೆ ಶಂಕೆ
ಘಟನೆಯ ಸೂಕ್ಷ್ಮತೆ ಅರಿತು ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬಿಗಿ ಭದ್ರತೆಯಲ್ಲಿ ಅಂತ್ಯಸಂಸ್ಕಾರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿ, ಅವರನ್ನು ಕೊಲೆಗೈದು ಶವ ನೇಣು ಬಿಗಿದ ಸ್ಥಿತಿಯಲ್ಲಿ ಮರಕ್ಕೆ ನೇತು ಹಾಕಿದ್ದರು. ಈ ಪ್ರಕರಣ ಮಾಸುವ ಮೊದಲೇ ಮತ್ತೊಂದು ಅಮಾನವೀಯ ಘಟನೆ ಯೋಗಿ ನಾಡಲ್ಲಿ ನಡೆದಿದೆ.