ನವದೆಹಲಿ:ಭಾರತದ ಅಧ್ಯಕ್ಷತೆಯಲ್ಲಿ 2 ದಿನ ನವದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಭಾಗಿಯಾಗಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ನಿಯೋಗ ಭಾನುವಾರ ವಾಪಸ್ ತೆರಳಬೇಕಿದ್ದ ವಿಮಾನ ತಾಂತ್ರಿಕ ಸಮಸ್ಯೆಗೀಡಾಗಿದೆ. ಹೀಗಾಗಿ ಅವರು ಇಲ್ಲಿಯೇ ಉಳಿದುಕೊಂಡಿದ್ದು, ವಿಮಾನ ಸಮಸ್ಯೆ ಪರಿಹಾರವಾದ ಬಳಿಕ ಅವರು ಸ್ವದೇಶಕ್ಕೆ ಹಾರಲಿದ್ದಾರೆ ಎಂದು ತಿಳಿದುಬಂದಿದೆ.
ಟ್ರುಡೊ ಅವರ ವಿಮಾನ ಭಾನುವಾರ ರಾತ್ರಿ ಸ್ವದೇಶಕ್ಕೆ ಹಾರಬೇಕಿತ್ತು. ಆದರೆ, ವಿಮಾನವು ನಿರ್ಗಮನಕ್ಕೂ ಮುನ್ನವೇ ತೊಂದರೆಗೀಡಾಗಿದೆ. ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಕೆನಡಾದ ಸಶಸ್ತ್ರ ಪಡೆಗಳು ಪತ್ತೆ ಹಚ್ಚಿವೆ. ಹೀಗಾಗಿ ಪ್ರಯಾಣವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದ್ದು, ವಿಮಾನವನ್ನು ಸಿದ್ಧಪಡಿಸಿದ ಬಳಿಕ ಪ್ರಯಾಣ ಬೆಳೆಸಲಾಗುವುದು ಎಂದು ಕೆನಡಾದ ಹೈ ಕಮಿಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲೇ ನಿಯೋಗ ವಸತಿ:ಕೆನಡಾ ಪ್ರಧಾನಿಯನ್ನು ಹೊತ್ತೊಯ್ಯಬೇಕಿದ್ದ ಸಿಎಫ್ಸಿ 001 ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಅದನ್ನು ಕೆನಡಾದ ಸಶಸ್ತ್ರ ಪಡೆಗಳು ಪತ್ತೆ ಮಾಡಿದೆ. ಪ್ರಧಾನಿ ಮತ್ತು ಅವರ ನಿಯೋಗ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ತಾಂತ್ರಿಕ ಸಮಸ್ಯೆ ರಾತ್ರೋರಾತ್ರಿ ಸರಿಪಡಿಸಲಾಗುವುದಿಲ್ಲ. ಪರ್ಯಾಯ ವ್ಯವಸ್ಥೆ ಮಾಡುವವರೆಗೆ ನಿಯೋಗವು ಭಾರತದಲ್ಲಿಯೇ ಉಳಿಯಬೇಕಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಕಚೇರಿ ಮಾಧ್ಯಮಗಳಿಗೆ ತಿಳಿಸಿದೆ.
ದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್‌ನ ಅಧಿಕಾರಿಯೊಬ್ಬರು, ಪ್ರಧಾನಿಯವರ ಪ್ರಯಾಣವನ್ನು ಅಂತಿಮಗೊಳಿಸಿದ ನಂತರ ಹಂಚಿಕೊಳ್ಳಲಾಗುವುದು ಎಂದು ಹೇಳಿದರು.