ಹೈದರಾಬಾದ್:ಕಳೆದು ಹೋದ ಬ್ಯಾಗ್ ಹುಡುಕಲು ವಿಮಾನಯಾನ ಸಂಸ್ಥೆ ಇಂಡಿಗೋ ವೆಬ್ಸೈಟ್ ಹ್ಯಾಕ್ ಮಾಡಿರುವುದಾಗಿ ಟೆಕ್ಕಿಯೊಬ್ಬ ತಿಳಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಂದನ್ ಕುಮಾರ್ ಎಂಬಾತ ಆಕಸ್ಮಿಕವಾಗಿ ಇನ್ನೊಬ್ಬರ ಬ್ಯಾಗ್ ತೆಗೆದುಕೊಂಡು ಬಂದಿದ್ದು, ತನ್ನ ಬ್ಯಾಗ್ ವಾಪಸ್ ಪಡೆದುಕೊಳ್ಳುವ ಉದ್ದೇಶದಿಂದ ವೆಬ್ಸೈಟ್ ಹ್ಯಾಕ್ ಮಾಡಿರುವುದಾಗಿ ಆತ ಹೇಳಿದ್ದಾನೆ. ಆದರೆ, ಈ ವಿಚಾರವನ್ನು ಇಂಡಿಗೋ ಏರ್ಲೈನ್ಸ್ ತಳ್ಳಿ ಹಾಕಿದೆ.
ಮಾರ್ಚ್ 27ರಂದು ಪಾಟ್ನಾದಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ನಂದನ್ ಪ್ರಯಾಣ ಮಾಡಿದ್ದರು. ಈ ವೇಳೆ ಅವರ ಲಗೇಜ್ ಬದಲಾಗಿದೆ. ಮನೆಗೆ ಬಂದ ನಂತರ ಈ ವಿಷಯ ಗಮನಕ್ಕೆ ಬಂದಿದೆ. ತಕ್ಷಣವೇ ವಿಮಾನಯಾನ ಸಂಸ್ಥೆಯ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ವೇಳೆ ಸರಿಯಾದ ಪ್ರತಿಕ್ರಿಯೆ ದೊರೆತಿಲ್ಲ. ಪ್ರೋಟೋಕಾಲ್ ಗಮನದಲ್ಲಿಟ್ಟುಕೊಂಡು ಸಹ ಪ್ರಯಾಣಿಕರ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ವೆಬ್ಸೈಟ್ ಹ್ಯಾಕ್ ಮಾಡಿ, ತನ್ನ ಬ್ಯಾಗ್ ತೆಗೆದುಕೊಂಡು ಹೋಗಿದ್ದ ಸಹ ಪ್ರಯಾಣಿಕರ ಫೋನ್ ಸಂಖ್ಯೆ ಹಾಗೂ ಇಮೇಲ್ ಪಡೆದುಕೊಂಡಿದ್ದಾನೆ. ಇದೇ ವೇಳೆ, ಆತನಿಗೆ ಫೋನ್ ಮಾಡಿ, ಬ್ಯಾಗ್ ವಾಪಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ನಂದನ್ ಹ್ಯಾಕಿಂಗ್ ವಿಧಾನದ ಮೂಲಕ ತನ್ನ ಬ್ಯಾಗ್ ವಾಪಸ್ ಪಡೆದುಕೊಂಡಿದ್ದಾನೆ. ಈ ಕುರಿತು ಟ್ವೀಟ್ ಮಾಡಿರುವ ನಂದನ್, ಇಂಡಿಗೋ ಏರ್‌ಲೈನ್‌ನ ವೆಬ್‌ಸೈಟ್‌ನ ಭದ್ರತೆಯಲ್ಲಿನ ನ್ಯೂನತೆಗಳಿಂದಾಗಿ ತಮ್ಮ ಲಗೇಜ್ ಪಡೆದುಕೊಂಡಿರುವ ಸ್ಟೋರಿ ಟ್ವೀಟರ್ನಲ್ಲಿ ಹಾಕಿಕೊಂಡಿದ್ದಾನೆ.
ಇದನ್ನೂ ಓದಿ:ಬದೌನಿ ಸ್ಫೋಟಕ ಬ್ಯಾಟಿಂಗ್: ಚೆನ್ನೈ ವಿರುದ್ಧ ಲಖನೌಗೆ ರೋಚಕ ಗೆಲುವು
ಈತನ ಟ್ವೀಟ್ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಇಂಡಿಗೋ, ಮಾಹಿತಿ ಗೌಪ್ಯತೆಯ ಉದ್ದೇಶದಿಂದ ಸಹ ಪ್ರಯಾಣಿಕರ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವೆಬ್ಸೈಟ್ ಬಲಿಷ್ಠವಾಗಿದೆ. ಯಾವುದೇ ಹಂತದಲ್ಲೂ ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದಿದೆ.