ಕೋಲ್ಕತಾ : ಅಕ್ಟೋಬರ್ 3 ರಂದು ತಾವು ನವದೆಹಲಿಯ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಅದರ ಬದಲಾಗಿ ಅಭಿಷೇಕ್ ಅಕ್ಟೋಬರ್ 2-3 ರಂದು ದೆಹಲಿಯಲ್ಲಿ ಪಕ್ಷದ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾರಾಗುವಂತೆ ಇಡಿ ಅಭಿಷೇಕ್ರಿಗೆ ನೋಟಿಸ್ ನೀಡಿತ್ತು. ಆದರೆ ಅ.3 ರ ವಿಚಾರಣೆಗೆ ತಾವು ಹಾಜರಾಗುತ್ತಿಲ್ಲ ಎಂದು ತೃಣಮೂಲ ಪಕ್ಷದ ಸಂಸದರೂ ಆಗಿರುವ ಅಭಿಷೇಕ್ ಬ್ಯಾನರ್ಜಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಸೆಪ್ಟೆಂಬರ್ 13 ರಂದು ಇಡಿ ಎದುರು ಅಭಿಷೇಕ್ ಬ್ಯಾನರ್ಜಿ ಹಾಜರಾಗಿದ್ದರು. ಆದರೆ ಆ ಸಮಯದಲ್ಲಿ ಅವರು ತಮ್ಮ ಪೂರ್ವನಿಗದಿತ ಎಲ್ಲ ಕಾರ್ಯಕ್ರಮಗಳನ್ನು ಬಿಟ್ಟು ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೆ ಇದೇ ಕಾರಣದಿಂದ ಅವರು ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಗೂ ಹಾಜರಾಗಲು ಆಗಿರಲಿಲ್ಲ. ಆದರೆ ಈ ಬಾರಿ ಮಾತ್ರ ಅವರು ಇಡಿ ನೋಟಿಸ್ಗೆ ಸ್ಪಂದಿಸುತ್ತಿಲ್ಲ.
"ಎಲ್ಲ ಅಡೆತಡೆಗಳ ಹೊರತಾಗಿಯೂ ಪಶ್ಚಿಮ ಬಂಗಾಳದ ಸಮಸ್ಯೆಗಳ ನಿವಾರಣೆಗೆ ಮತ್ತು ರಾಜ್ಯಕ್ಕೆ ಸಿಗಬೇಕಾದ ನ್ಯಾಯಯುತವಾದ ಹಕ್ಕುಗಳನ್ನು ಪಡೆಯಲು ಹೋರಾಟ ಮುಂದುವರಿಯಲಿದೆ. ಪಶ್ಚಿಮ ಬಂಗಾಳದ ಜನರಿಗಾಗಿ ಹಾಗೂ ಅವರ ಮೂಲಭೂತ ರಕ್ಷಣೆಗಳಿಗಾಗಿ ಹೋರಾಡುವ ನನ್ನ ಬದ್ಧತೆಯನ್ನು ಈ ವಿಶ್ವದ ಯಾವುದೇ ಶಕ್ತಿಯೂ ತಡೆಯಲಾರದು. ಅಕ್ಟೋಬರ್ 2 ಮತ್ತು 3 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ಸಾಧ್ಯವಾದರೆ ನನ್ನನ್ನು ತಡೆದು ನೋಡಿ" ಎಂದು ಅಭಿಷೇಕ್ ಎಕ್ಸ್ನಲ್ಲಿ ಬರೆದಿದ್ದಾರೆ.