ವಲ್ಸಾದ್ (ಗುಜರಾತ್): ಗುಜರಾತ್ನ ವಲ್ಸಾದ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಾಮೋಹಿಕವಾಗಿ ನಡೆಯುವ ಪ್ರಾರ್ಥನೆಗೆ ತಡವಾಗಿ ಬಂದಿದ್ದಕ್ಕಾಗಿ ಶಾಲಾ ಶಿಕ್ಷಕರೊಬ್ಬರು 40 ವಿದ್ಯಾರ್ಥಿಗಳಿಗೆ ಥಳಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಧರ್ಮಪುರದಿಂದ 35 ಕಿ.ಮೀ ದೂರದಲ್ಲಿರುವ ವಲ್ಸಾದ್ ಜಿಲ್ಲೆ ಖಡ್ಕಿ ಗ್ರಾಮದಲ್ಲಿ ಮಹಾರಾಷ್ಟ್ರ ಗಡಿಗೆ ಸಮೀಪದಲ್ಲಿ ಈ ಘಟನೆ ನಡೆದಿದೆ. ಶಾಲೆಯನ್ನು ಸರ್ವೋದಯ ಪರಿವಾರ ಟ್ರಸ್ಟ್ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳು ಶಾಲೆಯ ಸಮೀಪದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಪ್ರಾರ್ಥನೆ ಪ್ರಾರಂಭವಾದ ನಂತರ ಅವರು ಶಾಲೆಗೆ ಬಂದರು. ಇದರಿಂದ ಅಸಮಾಧಾನಗೊಂಡ ಮುಖ್ಯೋಪಾಧ್ಯಾಯರು ಅವರಿಗೆ ಹೊಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶುಕ್ರವಾರ ತಮ್ಮ ಮಕ್ಕಳು ಶಾಲೆಗೆ ಬಂದಾಗ ಬೆಳಗ್ಗೆ ಪ್ರಾರ್ಥನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಒಂದು ಸಾಲಿನಲ್ಲಿ ನಿಂತಿದ್ದರು. ಇದರಿಂದ ಸಿಟ್ಟಿಗೆದ್ದ ಶಾಲಾ ಶಿಕ್ಷಕರು ಕೋಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆರೋಪ ಮಾಡಿದ್ದಾರೆ.
40 ವಿದ್ಯಾರ್ಥಿಗಳಿಗೆ ಥಳಿಸಿದ ಗಂಭೀರ ದೂರು:ಮಕ್ಕಳ ವರ್ತನೆಯಿಂದ ರೊಚ್ಚಿಗೆದ್ದಶಿಕ್ಷಕರು ಕನಿಷ್ಠ 40 ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ. ಇದರಲ್ಲಿ ಅನೇಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸುಮಾರು 10 ಮಕ್ಕಳ ಕೈ ಮತ್ತು ಕಾಲುಗಳು ಊದಿಕೊಂಡಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಪೋಷಕರು, ಶಿಕ್ಷಕರಿಂದ ಏಟು ತಿಂದ ಕೆಲ ಮಕ್ಕಳಿಗೆ ನಡೆಯಲೂ ಸಹ ಸಾಧ್ಯವಾಗಲಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ ಶಿಕ್ಷಕರಿಂದ ಏಟು ತಿಂದ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ತಿಳಿದ ತಕ್ಷಣ ಪೋಷಕರು ಶಾಲೆಗೆ ಧಾವಿಸಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಕೂಡಾ ನಡೆಸಿದರು.