ಮಥುರಾ(ಉತ್ತರ ಪ್ರದೇಶ):ಶಾಲಾ ಆವರಣದಲ್ಲಿ ನೀರು ನಿಂತಿದ್ದ ಕಾರಣ ಶಿಕ್ಷಕಿಯೊಬ್ಬರು ಶಾಲೆಯೊಳಗೆ ಬರಲು ಕುರ್ಚಿಗಳ ಸೇತುವೆ ನಿರ್ಮಿಸಿ, ವಿದ್ಯಾರ್ಥಿಗಳ ಆಸರೆಯಿಂದ ಒಳಗೆ ಬಂದಿರುವ ವಿಡಿಯೋ ತುಣಕವೊಂದು ವೈರಲ್ ಆಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಅಮಾನತುಗೊಳಿಸಿದೆ.
ವಿಡಿಯೋ: ನೀರಿನಲ್ಲಿ ನಡೆದು ಬಾರದ ಶಿಕ್ಷಕಿಗೆ ಕುರ್ಚಿಗಳ ಸೇತುವೆ: ವಿದ್ಯಾರ್ಥಿಗಳ ಆಸರೆ! - ನೀರಿನಲ್ಲಿ ನಡೆದು ಬಾರದ ಶಿಕ್ಷಕಿ
ಶಾಲಾ ಶಿಕ್ಷಕಿಯೊಬ್ಬರು ಮಾಡಿರುವ ಎಡವಟ್ಟುವೊಂದು ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಥುರಾದ ಮಹಾವನ್ ತಹಸಿಲ್ ಪ್ರದೇಶದ ದಗೆಂಟಾದ ಬಲದೇವ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಳೆಯ ಕಾರಣ ಶಾಲಾ ಅಂಗಳದಲ್ಲಿ ನೀರು ತುಂಬಿತ್ತು. ಅಲ್ಲಿಂದ ದಾಟಿ ಬರಲು ಶಾಲಾ ಶಿಕ್ಷಕಿಗೋಸ್ಕರ ಕುರ್ಚಿ ಹಾಕಲಾಗಿದ್ದು, ನೀರಿನಲ್ಲಿ ನಿಂತುಕೊಂಡಿರುವ ವಿದ್ಯಾರ್ಥಿಗಳು ಅವರಿಗೆ ಸಹಾಯ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಶಿಕ್ಷಕಿ ಪಲ್ಲವಿ ಅವರನ್ನ ಅಮಾನತುಗೊಳಿಸಿದ್ದಾರೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಶಿಕ್ಷಕಿ ಪಲ್ಲಿವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಪ್ರಭಾರಿ ರಾಜಲಕ್ಷ್ಮಿ ಪಾಂಡೆ ಮಾಹಿತಿ ನೀಡಿದ್ದು, ಈಗಾಗಲೇ ಅವರನ್ನ ಅಮಾನತುಗೊಳಿಸಲಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಮತ್ತೊಂದೆಡೆ ಶಾಲಾ ಕೊಠಡಿಯಲ್ಲಿ ಕುಳಿತುಕೊಂಡಿರುವ ಶಿಕ್ಷಕಿಯೊಬ್ಬರಿಗೆ ವಿದ್ಯಾರ್ಥಿನಿ ತಲೆ ಮಸಾಜ್ ಮಾಡ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎನ್ನಲಾಗ್ತಿದೆ.