ಕಣ್ಣೂರು (ಕೇರಳ):ಸಮಾಜಕ್ಕೆ ಆದರ್ಶವಾಗಬೇಕಿದ್ದ ಶಿಕ್ಷಕ ಪೈಶಾಚಿಕತೆ ಮೆರೆದಿದ್ದು, 2 ವರ್ಷದಿಂದ ತನ್ನ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಗಂಭೀರ ಆರೋಪದ ಮೇಲೆ ಜೈಲು ಕಂಬಿ ಎಣಿಸುವಂತಾಗಿದೆ. ಮಕ್ಕಳು ನೀಡಿದ ದೂರಿನ ಆಧಾರದಲ್ಲಿ ಶಿಕ್ಷಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾ ಚೈಲ್ಡ್‌ಲೈನ್ ಅಧಿಕಾರಿಗಳೂ ದೂರು ನೀಡಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
2021ರ ನವೆಂಬರ್‌ನಿಂದ 26 ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪ 52 ವರ್ಷದ ಹಿರಿಯ ಶಿಕ್ಷಕನ ಮೇಲಿದೆ. ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ತಾನು ಎದುರಿಸಿದ ದೌರ್ಜನ್ಯವನ್ನು ಶಾಲೆಯ ಮತ್ತೊಬ್ಬ ಶಿಕ್ಷಕಿಯ ಬಳಿ ಹೇಳಿಕೊಂಡಿದ್ದಳು. ಈ ಬಗ್ಗೆ ಚೈಲ್ಡ್‌ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಚೈಲ್ಡ್‌ಲೈನ್ ಅಧಿಕಾರಿಗಳು ಶಿಕ್ಷಕನ ವಿರುದ್ಧ ಕೇಸ್ ದಾಖಲಿಸಿದ್ದರು.
ಜನವರಿ 11 ರಂದು ದೂರು ದಾಖಲಿಕೊಂಡ ಪೊಲೀಸರು, ಶಿಕ್ಷಕನ ಹೆಡೆಮುರಿ ಕಟ್ಟಿದ್ದಾರೆ. ಈ ಶಿಕ್ಷಕನ ಕಿರುಕುಳಕ್ಕೆ ಒಳಗಾದ ಬಗ್ಗೆ 21 ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಎಲ್ಲ ಮಕ್ಕಳಿಂದ ದೂರು ಪಡೆದು ಆರೋಪಿ ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ನಂತರ ಶಾಲೆ ಪುನರಾರಂಭವಾದ ಬಳಿಕ ಶಿಕ್ಷಕನ ಕರ್ಮಕಾಂಡಗಳು ಹೊರಬಿದ್ದಿವೆ. ಅಂದಿನಿಂದ ಶಿಕ್ಷಕ ವಿದ್ಯಾರ್ಥಿನಿಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಿದ್ದಾನೆ. ಇದನ್ನು ಬಾಯಿಬಿಡಲು ಮಕ್ಕಳು ಹೆದರಿದ್ದರು. ಈಚೆಗೆ ವಿದ್ಯಾರ್ಥಿನಿಯೊಬ್ಬಳು ದೂರು ನೀಡಿದ ಬಳಿಕ ದೌರ್ಜನ್ಯಕ್ಕೊಳಗಾದ ಎಲ್ಲ ಮಕ್ಕಳು ಕೂಡಾ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದ ಮದರಸಾ ಶಿಕ್ಷಕ:ಇದೇ ರೀತಿಯಾಗಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮದರಸಾವೊಂದರ ಶಿಕ್ಷಕನನ್ನು ಕೇರಳ ಪೊಲೀಸರು ವರ್ಷಗಳ ಹಿಂದೆ ಬಂಧಿಸಿದ್ದರು. ಕೊಟ್ಟಾಯಂ ಜಿಲ್ಲೆಯ ಮದರಸಾದ ವಿ.ಎಂ.ಯೂಸುಫ್ (60) ಬಂಧಿತ ಶಿಕ್ಷಕ. ತಿಸ್ಸೂರಿನ ಕೊಡುಗಲ್ಲೂರಿನಲ್ಲಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಅಪ್ರಾಪ್ತ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ದುರುಳ ಶಿಕ್ಷಕ, ಸಿಹಿತಿಂಡಿ ನೀಡುವ ನೆಪದಲ್ಲಿ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ. ಮದರಸಾದ ಮಕ್ಕಳು ಈತನ ಕಾಮದಾಟಕ್ಕೆ ಬೇಸತ್ತು ಪೋಷಕರ ಬಳಿ ದೂರು ನೀಡಿದ್ದು, ಬಳಿಕ ಕೃತ್ರಿಮನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ.
ಮಲಪ್ಪುರಂನಲ್ಲಿ 60 ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ:ಮಲಪ್ಪುರಂ ಜಿಲ್ಲೆಯಲ್ಲಿ 30 ವರ್ಷಗಳಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಿವೃತ್ತ ಶಿಕ್ಷಕನನ್ನು ಬಂಧಿಸಲಾಗಿತ್ತು. ಆಘಾತಕಾರಿ ವಿದ್ಯಮಾನ ಬೆಳಕಿಗೆ ಬಂದ ಬಳಿಕ ತನಿಖೆಗೆ ಕೇರಳ ಸರ್ಕಾರ ಆದೇಶಿಸಿತ್ತು. ಮಲಪ್ಪುರಂನ ಸೇಂಟ್ ಜೆಮ್ಮಾಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಶಿಕ್ಷಕ ಹಾಗೂ ಮಲಪ್ಪುರಂ ಪುರಸಭೆಯ ಕೌನ್ಸಿಲ್ ಸದಸ್ಯ ಕೆ.ವಿ. ಶಶಿಕುಮಾರ್ ಬಂಧಿತ ಆರೋಪಿ.
ಮೂರು ಬಾರಿ ಪುರಸಭೆ ಸದಸ್ಯ, ಸಿಪಿಎಂ ನಾಯಕನಾಗಿದ್ದ ಶಶಿಕುಮಾರ್ ಮಲಪ್ಪುರಂನ ಸೇಂಟ್ ಜೆಮ್ಮಾಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತನಾಗಿದ್ದ. ವೃತ್ತಿ ಜೀವನದ 30 ವರ್ಷಗಳಲ್ಲಿ ಸುಮಾರು 60 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಈತನ ಮೇಲಿದೆ. ಶಶಿಕುಮಾರ್ ಶಿಕ್ಷಕನಾಗಿದ್ದ ಶಾಲೆಯ ಹಳೆ ವಿದ್ಯಾರ್ಥಿನಿ 'ಮೀಟೂ' ಆರೋಪ ಮಾಡಿದ ಬಳಿಕ ಒಂದೊಂದೇ ಆರೋಪಗಳು ಬೆಳಕಿಗೆ ಬಂದಿವೆ. ಬಳಿಕ ಶಶಿಕುಮಾರ್ನಿಂದ ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿಯರು ದೂರುಗಳನ್ನು ಸಲ್ಲಿಸಿದ್ದು, ಇದರ ಆಧಾರದ ಮೇಲೆ ಬಂಧಿಸಲಾಗಿದೆ.
ಇದನ್ನೂ ಓದಿ:30 ವರ್ಷಗಳಲ್ಲಿ 60 ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದ ಶಿಕ್ಷಕ ಕೊನೆಗೂ ಅರೆಸ್ಟ್!