ಸೊಲ್ಲಾಪುರ (ಮಹಾರಾಷ್ಟ್ರ):ಇಲ್ಲಿಯಬಾರ್ಶಿ ಪಟ್ಟಣದ ಉಪ್ಲೈ ರಸ್ತೆಯಲ್ಲಿರುವ ನಾಯ್ಕವಾಡಿ ಪ್ಲಾಟ್‌ನಲ್ಲಿ ತನ್ನ ಪತ್ನಿ ಮತ್ತು ಮಗನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಶಿಕ್ಷಕ ಪತಿ ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆಯಿಂದ ಮೃತರ ಕುಟುಂಬಸ್ಥರು ಹಾಗೂ ಅಲ್ಲಿನ ಜನರು ಬೆಚ್ಚಿ ಬಿದ್ದಿದ್ದಾರೆ.
ಮೃತರನ್ನು ಅತುಲ್ ಸುಮಂತ್ ಮುಂಡೆ (40), ತೃಪ್ತಿ ಅತುಲ್ ಮುಂಡೆ (35) ಹಾಗು 5 ವರ್ಷದ ಮಗ ಎಂದು ಗುರುತಿಸಲಾಗಿದೆ. ಪತಿ ಅತುಲ್ ಮುಂಡೆ ಕರ್ಮಲಾ ತಾಲೂಕಿನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಪತ್ನಿ ತೃಪ್ತಿ ಮುಂಡೆ ಬಾರ್ಶಿಯ ಅಭಿನವ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದ ಅತುಲ್ ಮುಂಡೆ ದಂಪತಿ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರು, ಕೆಳಗೆ ಅತುಲ್ ಪೋಷಕರು ವಾಸ ಮಾಡುತ್ತಿದ್ದರು.
ಎಂದಿನಂತೆ ಯಾರೂ ಕೆಳಗಿಳಿಯದ ಕಾರಣ ಮಂಗಳವಾರ ಬೆಳಗ್ಗೆ ಪೋಷಕರು ಮೇಲಿನ ಮಹಡಿಗೆ ತೆರಳಿ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಬಾರ್ಶಿ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಯಾವ ಕಾರಣಕ್ಕೆ ಕೃತ್ಯ ನಡೆದಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಬಾರ್ಶಿ ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ.