ಫರೂಕಾಬಾದ್(ಉತ್ತರ ಪ್ರದೇಶ):ಹೆಂಡತಿ ಸಾವಿನಿಂದ ಬೇಸರಗೊಂಡ ಶಿಕ್ಷಕನೋರ್ವ ಇಬ್ಬರು ಅಮಾಯಕ ಹೆಣ್ಣು ಮಕ್ಕಳನ್ನು ಕೊಲೆಗೈದು, ತದನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಫಾರೂಕಾಬಾದ್ನಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಇಂದು ಬೆಳಗ್ಗೆ ಸುನೀಲ್ ಜಾದವ್ (38) ಮೃತದೇಹ ಫ್ಯಾನ್‌ನಲ್ಲಿ ನೇತಾಡುತ್ತಿತ್ತು. ಉಳಿದಂತೆ ಹೆಣ್ಣು ಮಕ್ಕಳಾದ ಶಗುನ್ (7) ಮತ್ತು ಸೃಷ್ಟಿ (11) ಅವರ ಶವಗಳು ಹಾಸಿಗೆಯ ಮೇಲೆ ಪತ್ತೆಯಾಗಿವೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಹೆಣ್ಣು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿರುವ ಸುನೀಲ್ ತದನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮೂವರ ಮೃತದೇಹಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.