ಉದಯಪುರ (ರಾಜಸ್ಥಾನ):ಕರ್ನಾಟಕದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ಪರೀಕ್ಷೆ ಪತ್ರಿಕೆ ಸೋರಿಕೆಯಾಗಿ ಭಾರಿ ವಿವಾದ ಉಂಟಾದಂತೆ ರಾಜಸ್ಥಾನದಲ್ಲೂ ಶಿಕ್ಷಕರ ನೇಮಕಾತಿ ಪರೀಕ್ಷಾ ಪತ್ರಿಕೆ ಎಕ್ಸಾಂಗೂ ಮೂರು ದಿನ ಮೊದಲು ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ. ಪ್ರಕರಣದಲ್ಲಿ ಅಭ್ಯರ್ಥಿಗಳು ಸೇರಿದಂತೆ 44 ಜನರನ್ನು ಬಂಧಿಸಲಾಗಿದೆ. ನೇಮಕಾತಿಗೆ ಜನವರಿ 29 ರಂದು ಮರು ಪರೀಕ್ಷೆ ನಡೆಯಲಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಶಿಕ್ಷಕರ ನೇಮಕಾತಿಗಾಗಿ ರಾಜ್ಯಾದ್ಯಂತ ಶನಿವಾರ ಪರೀಕ್ಷೆ ನಡೆಯಬೇಕಿತ್ತು. ಆದರೆ, ಮೂರು ದಿನಗಳ ಹಿಂದೆ ಪ್ರಶ್ನೆ ಪತ್ರಿಕೆಗಳು ಸ್ಟ್ರಾಂಗ್ ರೂಮ್ ಸೇರುವ ಮುನ್ನವೇ ಸೋರಿಕೆಯಾಗಿದ್ದವು. ಈ ಬಗ್ಗೆ ದಾಖಲಾದ ದೂರಿನ ಮೇರೆಗೆ ನಡೆದ ತನಿಖೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಗೊತ್ತಾಗಿದೆ. ಇದರಿಂದ ಶಿಕ್ಷಣ ಇಲಾಖೆ ದಿಢೀರ್ ಆಗಿ ಪರೀಕ್ಷೆಯನ್ನು ರದ್ದು ಮಾಡಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
5,378 ಖಾಲಿ ಹುದ್ದೆಗಳಿಗೆ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆ(ರೀಟ್) ಹಮ್ಮಿಕೊಂಡಿದ್ದು, 26 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಗೆ ಸಜ್ಜಾಗಿದ್ದ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆಯಾದ ಸುದ್ದಿಯ ಬಳಿಕ ಆತಂಕಕ್ಕೀಡಾಗಿದ್ದರು. ಬಳಿಕ ಸರ್ಕಾರವೇ ಪರೀಕ್ಷೆಯನ್ನು ರದ್ದು ಮಾಡಿದೆ.
ಪರೀಕ್ಷೆ ರದ್ದು, ಅಭ್ಯರ್ಥಿಗಳಿಂದ ಪ್ರತಿಭಟನೆ:ಶಿಕ್ಷಕರ ನೇಮಕಾತಿಗಾಗಿ ನಡೆಯಬೇಕಿದ್ದ ಅರ್ಹತಾ ಪರೀಕ್ಷೆ ರದ್ದಾದ ಬಳಿಕ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ಪೇಪರ್ ಸೋರಿಕೆಯಿಂದಾಗಿ ತಮ್ಮ ಭವಿಷ್ಯ ಡೋಲಾಯಮಾನವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಭ್ಯರ್ಥಿಗಳು ಬೀದಿಗಿಳಿದರು. ಇಂದು ಬೆಳಗೆಗ 9 ಗಂಟೆಗೆ ಆರಂಭವಾಗಬೇಕಿದ್ದ ಸಾಮಾನ್ಯ ಜ್ಞಾನ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿ ತಿಳಿದ ತಕ್ಷಣ ಅಲ್ಲಿನ ಶಿಕ್ಷಣ ಇಲಾಖೆ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಘೋಷಿಸಿತು.
ಆರೋಪಿಗಳ ಬಂಧನ:ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಚುರುಕಿನ ತನಿಖೆ ನಡೆಸಿದ ಪೊಲೀಸರು ಉದಯಪುರದಲ್ಲಿ 37 ವಿದ್ಯಾರ್ಥಿಗಳು ಮತ್ತು ಏಳು ಮಂದಿ ಸೇರಿದಂತೆ 44 ಜನರನ್ನು ಬಂಧಿಸಿದ್ದಾರೆ. ಪ್ರಶ್ನೆಪತ್ರಿಕೆ ನಕಲು ಮಾಡಿದ ಆರೋಪದ ಮೇಲೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಯಾವುದೇ ಪರೀಕ್ಷೆಗೆ ಅವರು ಹಾಜರಾಗದಂತೆ ನಿರ್ಬಂಧ ವಿಧಿಸಲಾಗಿದೆ.