ಜೋಧಪುರ(ರಾಜಸ್ಥಾನ):ಖಾಸಗಿ ಶಾಲೆಯ ಶಿಕ್ಷಕರೊಬ್ಬರು ತನ್ನ ಹೆಂಡತಿ, ಮಕ್ಕಳನ್ನು ಹಿಗ್ಗಾಮುಗ್ಗಾ ಥಳಿಸಿ ಅರೆನಗ್ನವಾಗಿದ್ದ ಮಹಿಳೆಯನ್ನು ಮನೆಯಿಂದ ಹೊರದಬ್ಬಿದ್ದಾರೆ. ಅಲ್ಲದೇ, ಪತ್ನಿ ಗೊಳೋ ಎಂದು ಆಚೆ ಅಳುತ್ತಿದ್ದರೆ ಕ್ರೂರಿ ಶಿಕ್ಷಕ ಮನೆಯ ಒಳಗಡೆ ಊಟ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. ಇದನ್ನು ಗಮನಿಸಿದ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ.
ಜೋಧಪುರ ಜಿಲ್ಲೆಯ ಫಲೋಡಿ ಪಟ್ಟಣದ ಖಾಸಗಿ ಶಾಲೆ ಕೈಲಾಶ್ ಸುತಾರ್ ಪತ್ನಿ ಮೇಲೆ ಹಲ್ಲೆ ಮಾಡಿದವರು. ಯಾವುದೋ ಕಾರಣಕ್ಕಾಗಿ ಪತ್ನಿಯ ಮೇಲೆ ಏಕಾಏಕಿ ಹಲ್ಲೆಗೆ ಮುಂದಾದ ಶಿಕ್ಷಕ, ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದಿದ್ದಾನೆ. ತಲೆಯನ್ನು ನೆಲಕ್ಕೆ ಗುದ್ದುತ್ತಿರುವುದು ಸಿಸಿಟಿವಿ ವಿಡಿಯೋದಲ್ಲಿದೆ.
ಪತ್ನಿ, ಮಕ್ಕಳನ್ನು ಹಿಗ್ಗಾಮುಗ್ಗಾ ಥಳಿಸಿ ಮನೆಯಿಂದ ಹೊರದಬ್ಬಿದ ಶಿಕ್ಷಕ ತಾಯಿಯ ಸಹಾಯಕ್ಕೆ ಬಂದ ಮಕ್ಕಳ ಮೇಲೂ ಶಿಕ್ಷಕ ಹಲ್ಲೆ ಮಾಡಿದ್ದಾನೆ. ಮಹಿಳೆ ಅರೆನಗ್ನವಾಗಿ ಬಿದ್ದು ಗೋಳಿಡುತ್ತಿದ್ದರೂ ಬಿಡದ ಶಿಕ್ಷಕ ಆಕೆಯನ್ನು ಮನೆಯಿಂದ ಹೊರದಬ್ಬಿದ್ದಾನೆ. ಇಷ್ಟೆಲ್ಲಾ ಮಾಡಿದ ಬಳಿಕ ಶಿಕ್ಷಕ ಮನೆಯ ಒಳಗಡೆ ಭರ್ಜರಿ ಭೋಜನ ಸವಿಯುತ್ತಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು, ಘಟನೆ ಅರಿತ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಮಹಿಳೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ಸಂತ್ರಸ್ತೆ ಮತ್ತು ಕುಟುಂಬಸ್ಥರು ದೂರು ನೀಡಿದ ಬಳಿಕ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ:ಅಮ್ಮ ಥಳಿಸುತ್ತಾರೆ.. ಊಟ ಕೇಳಿದರೂ ಹಾಕಲ್ಲ: ತಾಯಿ ವಿರುದ್ಧ ದೂರಲು ಠಾಣೆಗೆ ಬಂದ ಪುಟ್ಟ ಬಾಲಕ