ಅಮೇಥಿ(ಉತ್ತರ ಪ್ರದೇಶ):ಶಾಲೆಯಲ್ಲಿ ಮಕ್ಕಳು ಜಗಳವಾಡುವುದು ಸಾಮಾನ್ಯ. ಇದೇ ವಿಷಯಕ್ಕೆ ಕೋಪಗೊಂಡಿರುವ ಶಿಕ್ಷಕನೋರ್ವ ವಿದ್ಯಾರ್ಥಿಯೋರ್ವನ ಮೇಲೆ ಶೂಗಳಿಂದ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ.
ಅಮೇಥಿಯ ಮುಸಾಫಿರ್ಖಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಚಕ್ಬಹೇರ್ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. 8 ವರ್ಷದ ವಿದ್ಯಾರ್ಥಿಯೊಬ್ಬ ಇತರೆ ಮಕ್ಕಳೊಂದಿಗೆ ಜಗಳವಾಡಿದ್ದಾನೆ. ಇದನ್ನು ನೋಡಿರುವ ಶಿಕ್ಷಕ ಅಮಿತ್ ಯಾದವ್ ಮಗುವಿನ ಮೇಲೆ ಶೂಗಳಿಂದ ಹಲ್ಲೆ ನಡೆಸಿದ್ದಾನೆ.
ಶಾಲೆಯಿಂದ ಹೊರಡುವಾಗ ಅಮನ್ ಎಂಬಾತ ಇತರೆ ಮಕ್ಕಳೊಂದಿಗೆ ಜಗಳವಾಡಿದ್ದಾನೆ. ಈ ಕಾರಣದಿಂದಾಗಿ ಶಿಕ್ಷಕ ಅಮಿತ್ ಕೋಪಗೊಂಡು ಶೂಗಳನ್ನು ತೆಗೆದು ಮಗುವಿಗೆ ಹೊಡೆಯಲು ಪ್ರಾರಂಭಿಸಿದ್ದಾರೆ. ವಿಷಯ ತಿಳಿದ ಮಗುವಿನ ತಂದೆ ಧರ್ಮರಾಜ್ ಯಾದವ್, ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬ್ಲಾಕ್ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಟ್ಯೂಷನ್ಗೆ ಹೋದ ವಿದ್ಯಾರ್ಥಿನಿಗೆ ಥಳಿಸಿ, ಬಲವಂತದಿಂದ ಮದ್ಯ ಕುಡಿಸಿದ ಶಿಕ್ಷಕ
ಧರ್ಮರಾಜ್ ಯಾದವ್ ಮಾತನಾಡಿ, "ನನ್ನ ಮಗು 3ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದಾನೆ. ಪ್ರತಿ ದಿನದಂತೆ ಇಂದು ಸಹ ಶಾಲೆಯಲ್ಲಿ ಓದಲು ಹೋಗಿದ್ದಾನೆ. ಶಾಲೆ ಬಿಡುವ ವೇಳೆ ಕಾಲು ಜಾರಿ ಬಿದ್ದಿದ್ದು, ಇದರಿಂದ ಕೋಪಗೊಂಡ ಶಿಕ್ಷಕ ಶೂಗಳಿಂದ ಹೊಡೆದಿದ್ದಾನೆ. ಈ ಕುರಿತು ಬ್ಲಾಕ್ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದೇನೆ" ಎಂದರು.
ಅಮೇಥಿಯ ಬಿಎಸ್ಎ ಅಧಿಕಾರಿ ಸಂಗೀತಾ ಸಿಂಗ್ ಪ್ರತಿಕ್ರಿಯಿಸಿ, "ಪ್ರಕರಣದ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ಪಡೆದುಕೊಂಡಿದ್ದೇನೆ. ತನಿಖೆ ನಡೆಯುತ್ತಿದೆ" ಎಂದು ಹೇಳಿದರು.
ಮತ್ತೊಂದು ಪ್ರಕರಣದಲ್ಲಿ, ರಾಜಸ್ಥಾನದ ಉದಯಪುರದಲ್ಲಿ ಶಿಕ್ಷಕನೋರ್ವ ಕೇಳಿರುವ ಪ್ರಶ್ನೆ ಉತ್ತರಿಸಿಲಿಲ್ಲ ಎಂಬ ಕಾರಣಕ್ಕಾಗಿ 14 ವರ್ಷದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಉದಯಪುರದ ಹಿರಣ್ಮಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದ ಕಾರಣಕ್ಕಾಗಿ ಕೋಪಗೊಂಡ ಶಿಕ್ಷಕ ಮೇಜಿನ ಮೇಲೆ ಬಾಲಕನ ತಲೆ ಹೊಡೆದಿದ್ದಾನೆ. ಇದರಿಂದ ವಿದ್ಯಾರ್ಥಿಯ ಹಲ್ಲು ಉದುರಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.