ರಜೌರಿ (ಜಮ್ಮು ಮತ್ತು ಕಾಶ್ಮೀರ):ಹಣೆಗೆ ತಿಲಕವಿಟ್ಟು ಶಾಲೆಗೆ ತೆರಳಿದ್ದ ನಮ್ಮ ಮಗಳಿಗೆ ಶಿಕ್ಷಕರು ಥಳಿಸಿದ್ದಾರೆ ಎಂದು ಜಮ್ಮು ಕಾಶ್ಮೀರದ ಹಿಂದೂ ಕುಟುಂಬವೊಂದರ ವಿದ್ಯಾರ್ಥಿನಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿನಿಯನ್ನು ಶಿಕ್ಷಿಸಿದ ಶಿಕ್ಷಕನನ್ನು ನಿಸಾರ್ ಅಹಮದ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಿ ರಜೌರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರಜೌರಿಯ ಖದೂರಿಯನ್ ಪಂಚ್‌ಯಾತ್ ಡ್ರಮ್ಮನ್ ಎಂಬ ಮಿಡ್ಲ್ ಸ್ಕೂಲ್‌ನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಶಿಕ್ಷಕರು ಥಳಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿ ಬಂದಿತ್ತು. ಈ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ. ಶಾಲೆಯಲ್ಲಿ ಮಕ್ಕಳನ್ನು ದಂಡಿಸುವುದು ಐಪಿಸಿ ಕಲಂ 323, 325, 352 ಹಾಗು 506ರ ಅನ್ವಯ ಶಿಕ್ಷಾರ್ಹ ಅಪರಾಧ. ಇದನ್ನು ಹೊರತುಪಡಿಸಿ, ಬಾಲ ನ್ಯಾಯ ವ್ಯವಸ್ಥೆ (ಮಕ್ಕಳ ರಕ್ಷಣೆ) ಕಾಯ್ದೆ 2000 ಹೇಳುವಂತೆ, ಮಕ್ಕಳನ್ನು ಥಳಿಸಿರುವ, ದಂಡಿಸಿರುವ ಆರೋಪಿಗೆ 6 ತಿಂಗಳವರೆಗೆ ದಂಡಸಮೇತ ಜೈಲು ಶಿಕ್ಷೆ ವಿಧಿಸಬಹುದು ಎಂದು ಹೇಳಿದೆ.