ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​ನ ವಿಧಾನಸಭಾ ಟಿಕೆಟ್​ ಕೇಳಿದ​ ಅದೇ ಪಕ್ಷದ ಕಚೇರಿಯಲ್ಲಿ ಚಹಾ ಮಾರುತ್ತಿರುವ ವ್ಯಕ್ತಿ!

ಈ ವರ್ಷದ ಕೊನೆಯಲ್ಲಿ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಕಾಂಗ್ರೆಸ್​ ಈಗಾಗಲೇ ಸಿದ್ಧತೆ ಆರಂಭಿಸಿದೆ. ಇದರ ನಡುವೆ ಕಾಂಗ್ರೆಸ್​ನ ಚಾಯ್​ವಾಲಾ ಗಮನ ಸೆಳೆದಿದ್ದಾರೆ.

tea-seller-working-at-congress-office-seeks-ticket-to-contest-elections-in-himachal
ಕಾಂಗ್ರೆಸ್​ನ ವಿಧಾನಸಭಾ ಟಿಕೆಟ್​ ಕೇಳಿದ​ ಅದೇ ಪಕ್ಷದ ಕಚೇರಿಯಲ್ಲಿ ಚಹಾ ಮಾರುತ್ತಿರುವ ವ್ಯಕ್ತಿ

By

Published : Sep 3, 2022, 5:48 PM IST

ಶಿಮ್ಲಾ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಚಹಾ ಮಾರಾಟ ಮಾಡುತ್ತಿರುವ ವ್ಯಕ್ತಿಯೊಬ್ಬರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿದ್ದಾರೆ. ಇದಕ್ಕಾಗಿ ಅವರು ಕಾಂಗ್ರೆಸ್​ ಪಕ್ಷದ ಟಿಕೆಟ್​​ ಕೂಡ ಕೇಳಿ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್​ನ ವಿಧಾನಸಭಾ ಟಿಕೆಟ್​ ಕೇಳಿದ​ ಅದೇ ಪಕ್ಷದ ಕಚೇರಿಯಲ್ಲಿ ಚಹಾ ಮಾರುತ್ತಿರುವ ವ್ಯಕ್ತಿ

ಹೌದು, ರಾಜಧಾನಿ ಶಿಮ್ಲಾದಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ದೇವೇಂದ್ರ ಕುಮಾರ್ ಎಂಬುವವರು ಟೀ ಸ್ಟಾಲ್‌ ನಡೆಸುತ್ತಿದ್ದಾರೆ. ಈ ವರ್ಷ ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕಾಂಗ್ರೆಸ್ ಕಚೇರಿಯಲ್ಲಿ ಡಿಕೆ ಎಂದೇ ಹೆಸರಾಗಿರುವ 56 ವರ್ಷದ ದೇವೇಂದ್ರ ಕುಮಾರ್ ಕೂಡ ಶಿಮ್ಲಾ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ನಾನು 1982ರಲ್ಲೇ ಯೂತ್‌ ಕಾಂಗ್ರೆಸ್‌ಗೆ ಸೇರಿದ್ದೇನೆ. ಕಳೆದ 40 ವರ್ಷಗಳಿಂದ ನಿರಂತರವಾಗಿ ಪಕ್ಷದ ಒಡನಾಟ ಹೊಂದಿದ್ದೇನೆ. ಪಕ್ಷಕ್ಕೆ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಕಾರ್ಯಕರ್ತರಿಗೂ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್​ ಅವಕಾಶ ನೀಡಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನ ವಿಧಾನಸಭಾ ಟಿಕೆಟ್​ ಕೇಳಿದ​ ಅದೇ ಪಕ್ಷದ ಕಚೇರಿಯಲ್ಲಿ ಚಹಾ ಮಾರುತ್ತಿರುವ ವ್ಯಕ್ತಿ

ಈ ಹಿಂದೆಯೇ ನಾನು ಬೇರೆ ಸ್ಥಳದಲ್ಲಿ ಚಹಾ ಅಂಗಡಿ ನಡೆಸುತ್ತಿದ್ದೆ. ಆದರೆ, ಕೆಲ ಕಾರಣಗಳಿಂದ ಸುಮಾರು ಒಂಬತ್ತು ವರ್ಷಗಳ ಹಿಂದೆ ಆ ಅಂಗಡಿಯನ್ನು ಮುಚ್ಚಬೇಕಾಯಿತು. ನಂತರ ಕಾಂಗ್ರೆಸ್ ಪಕ್ಷವು ನನಗೆ ಕಚೇರಿಯಲ್ಲೇ ಚಹಾ ಕ್ಯಾಂಟೀನ್‌ಗಾಗಿ ಸ್ಥಳವನ್ನು ಕೊಟ್ಟಿತ್ತು. ಒಂಬತ್ತು ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ದೊಡ್ಡ ನಾಯಕರಿಗೂ ಚಾಯ್​​ ಮಾಡಿಕೊಟ್ಟಿರುವೆ ಎಂದು ತಿಳಿಸಿದ್ದಾರೆ.

ಕಾರ್ಯಕರ್ತರಿಗೂ ವಿಧಾನಸಭಾ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಅವಕಾಶ:ಅಲ್ಲದೇ, ಸುದೀರ್ಘ ಕಾಲದಿಂದ ಪಕ್ಷಕ್ಕೆ ನನ್ನ ಆದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ನನ್ನ ಕೃಷ್ಣನಗರ ಪ್ರದೇಶದಲ್ಲಿ ಪಕ್ಷದ ಬೇರೆ-ಬೇರೆ ಹುದ್ದೆಗಳಲ್ಲಿ ಕೆಲಸವನ್ನೂ ಮಾಡಿದ್ದೇನೆ. ಪಕ್ಷವು ಪ್ರತಿಯೊಬ್ಬ ಕಾರ್ಯಕರ್ತರಿಗೂ ವಿಧಾನಸಭಾ ಟಿಕೆಟ್​ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವುದು ಸಂತಸ ತಂದಿದೆ ಎಂದೂ ಹೇಳಿದ್ದಾರೆ.

ಶಿಮ್ಲಾದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬಯಸಿದ್ದೇನೆ. ಒಂದೊಮ್ಮೆ ಪಕ್ಷ ಟಿಕೆಟ್ ನೀಡಿದರೆ ಮತ್ತು ನಾನು ಗೆದ್ದು ಶಾಸಕನಾಗಿ ಆಯ್ಕೆಯಾದರೆ, ನನ್ನ ಸಂಬಳದಿಂದ ಒಂದು ರೂಪಾಯಿ ಕೂಡ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಬೇರೆಯವರಿಗೆ ಪಕ್ಷದ ಟಿಕೆಟ್ ಸಿಕ್ಕರೂ ಸಹ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಶ್ರಮಿಸುತ್ತೇನೆ. ಚಹಾ ಮಾರಾಟಗಾರನಾಗಿಯೇ ಮುಂದುವರಿಯುತ್ತೇನೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪ್ರತಿ ಕಾರ್ಯಕರ್ತನಿಗೂ ಅವಕಾಶ:ಕಾಂಗ್ರೆಸ್​ನ ಮುಖ್ಯ ವಕ್ತಾರ ನರೇಶ್ ಚೌಹಾಣ್ ಮಾತನಾಡಿ, ಪಕ್ಷವು ಪ್ರತಿಯೊಬ್ಬ ಕಾರ್ಯಕರ್ತರಿಗೂ ಮಹತ್ವ ನೀಡುತ್ತದೆ ಎಂಬುವುದನ್ನು ಇದು ತೋರಿಸುತ್ತದೆ. ಪ್ರತಿಯೊಬ್ಬರಿಗೂ ಪಕ್ಷವು ಉಮೇದುವಾರಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಈ ವರ್ಷ ದಾಖಲೆಯ 1,350 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ನಮ್ಮ ಕಚೇರಿಯಲ್ಲಿ ಟೀ ಸ್ಟಾಲ್ ನಡೆಸುತ್ತಿರುವ ದೇವೇಂದ್ರ ಕುಮಾರ್ ಕೂಡ ಒಬ್ಬರಾಗಿದ್ದಾರೆ. ಅವರ ಅರ್ಜಿಯನ್ನು ಸಹ ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್​ ಜನ ಸಾಮಾನ್ಯರ ಪಕ್ಷ:ಇದೇ ವೇಳೆ, ಕಾಂಗ್ರೆಸ್ ಜನಸಾಮಾನ್ಯರ ಪಕ್ಷವಾಗಿದ್ದು, ಜನಸಾಮಾನ್ಯರಿಗೆ ಪ್ರಾಮುಖ್ಯತೆ ನೀಡುತ್ತದೆ. ಆದರೆ, ಬಿಜೆಪಿ ಇದಕ್ಕೆ ವಿರುದ್ಧವಾಗಿದೆ. ಪ್ರಧಾನಿಯನ್ನು ಚಾಯ್​ವಾಲಾ ಎಂದು ಎಲ್ಲರೂ ಕರೆಯುತ್ತಾರೆ. ಆದರೆ, ಇಲ್ಲಿಯವರೆಗೆ ಇದು ಎಷ್ಟು ಸತ್ಯ ಎಂಬುವುದು ಯಾರಿಗೂ ತಿಳಿದಿಲ್ಲ. ಚಾಯ್​ವಾಲಾ ಎಂಬುವುದನ್ನು ಬಿಜೆಪಿ ಪ್ರಚಾರದ ಸರಕಾಗಿ ಮಾಡಿಕೊಂಡಿದೆ ಎಂದು ಟೀಕಿಸಿದರು.

ಶಿಮ್ಲಾ ನಗರ ವಿಧಾನಸಭಾ ಕ್ಷೇತ್ರದಿಂದ ದೇವೇಂದ್ರ ಕುಮಾರ್ ಸೇರಿದಂತೆ 40ಕ್ಕೂ ಅಧಿಕ ಮುಖಂಡರು ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ದೊಡ್ಡ ನಾಯಕರ ಪೈಕಿ ದೇವೇಂದ್ರ ಕುಮಾರ್ ಹೆಸರೇ ದೊಡ್ಡ ಮಟ್ಟದ ಚರ್ಚೆಯ ವಿಷಯವಾಗಿದೆ.

ಹಿಮಾಚಲ ಪ್ರದೇಶದ ಎಲ್ಲ 68 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1,350 ಅರ್ಜಿಗಳು ಸಲ್ಲಿಕೆಯಾಗಿದ್ದು, ಕಾಂಗ್ರೆಸ್​ನ ಚುನಾವಣಾ ಸ್ಕ್ರೀನಿಂಗ್ ಕಮಿಟಿಯು ಸೆಪ್ಟೆಂಬರ್ 5ರೊಳಗೆ ಕೂಲಂಕಷವಾಗಿ ಪರಿಶೀಲಿಸಿ ಮೊದಲ ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ನಂತರ ಈ ಪಟ್ಟಿ ಪಕ್ಷದ ಹೈಕಮಾಂಡ್​ಗೆ ರವಾನೆಯಾಗಲಿದೆ.

ಇದನ್ನೂ ಓದಿ:ಪಡಿತರದಲ್ಲಿ ಕೇಂದ್ರ ಸರ್ಕಾರದ ಪಾಲು ಗೊತ್ತಿರದ ಡಿಸಿಗೆ ಕೇಂದ್ರ ಹಣಕಾಸು ಸಚಿವರಿಂದ ತರಾಟೆ

ABOUT THE AUTHOR

...view details