ಕಾಂಚಿಪುರಂ (ತಮಿಳುನಾಡು) : ಸರ್ಕಾರಿ ಆಸ್ಪತ್ರೆ ಎಂದರೆ ಜನರಲ್ಲಿ ಅಸಡ್ಡೆ. ಉತ್ತಮವಾದ ವಾತಾವರಣ, ಚಿಕಿತ್ಸೆ, ಗುಣಮಟ್ಟದ ಔಷಧ ಬೇಕು ಎಂದರೆ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂಬ ಮನೋಭಾವ ಸಾಮನ್ಯವಾಗಿ ಜನರಲ್ಲಿ ಮೂಡಿದೆ. ಈ ಬೆನ್ನಲ್ಲೇ ಕಾಂಚಿಪುರಂ ಜಿಲ್ಲೆಯ ಉತ್ತರಮೇರೂರು ಬಳಿಯ ಸರ್ಕಾರಿ ಆಸ್ಪತ್ರೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಟೀ ಕಪ್ ಅನ್ನು ಆಕ್ಸಿಜನ್ ಮಾಸ್ಕ್ ಆಗಿ ಬಳಸಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾಂಚಿಪುರಂ ಜಿಲ್ಲೆಯ ಉತ್ರಮೇರೂರ್ ಬಳಿ ವಾಸಿಸುತ್ತಿರುವ ಶಾಲಾ ವಿದ್ಯಾರ್ಥಿಯೊಬ್ಬ ಕಳೆದ ಎರಡು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ. ಇದರಿಂದ ವಿದ್ಯಾರ್ಥಿಯ ತಂದೆ ಉತ್ತರ ಮೇರೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವಿದ್ಯಾರ್ಥಿಯನ್ನು ಪರೀಕ್ಷಿಸಿದ ವೈದ್ಯರು ಉಸಿರಾಟದ ಕೊಳವೆಯ ಮೂಲಕ ಆಮ್ಲಜನಕವನ್ನು ನೀಡುವಂತೆ ಸಲಹೆ ನೀಡಿದರು. ಆಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ಉಸಿರಾಟದ ಕೊಳವೆಯ ಮೂಲಕ ಆಮ್ಲಜನಕ ನೀಡಲು ಮಾಸ್ಕ್ ಇಲ್ಲದ ಕಾರಣ ಟೀ ಅಂಗಡಿಯಲ್ಲಿ ಬಳಸುತ್ತಿದ್ದ ಪ್ಲಾಸ್ಟಿಕ್ ಲೋಟಗಳನ್ನು ಖರೀದಿಸಿ, ವಿದ್ಯಾರ್ಥಿಯ ಮೂಗಿನ ಮೂಲಕ ಆಮ್ಲಜನಕವನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ :ಆಕ್ಸಿಜನ್ ದುರಂತ : ಅಪ್ಪನ ನೆನೆದು ಭಾವುಕಳಾದ ಬಾಲಕಿ.. ಕಂದನ ಮಾತಿಗೆ ಕಣ್ಣೀರಿಟ್ಟ ಜನ
ಹೀಗೆ ವಿಭಿನ್ನ ರೀತಿಯಲ್ಲಿ ಆಮ್ಲಜನಕ ನೀಡುವ ದೃಶ್ಯವನ್ನು ನೋಡಿದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದರಿಂದ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಬಡ ಜನರು ಚಿಕಿತ್ಸೆ ಪಡೆಯುತ್ತಾರೆ. ಆದರೆ, ಸೂಕ್ತ ಚಿಕಿತ್ಸೆ ನೀಡಲು ಸಣ್ಣ ಪ್ರಮಾಣದ ವೈದ್ಯಕೀಯ ಉಪಕರಣಗಳೂ ಇಲ್ಲವೇ? ಎಂದು ಹಲವರು ಅಂತರ್ಜಾಲದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.