ಹೈದರಾಬಾದ್ (ತೆಲಂಗಾಣ):ನಗರದ ಸೋಮಾಜಿಗುಡದಲ್ಲಿರುವ ಯಶೋದಾ ಆಸ್ಪತ್ರೆಯಲ್ಲಿ ಸೊಂಟದ ಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆಸಿಆರ್ ಅವರನ್ನು ಗಣ್ಯರು ಭೇಟಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಗವರ್ನರ್ ತಮಿಳಿಸೈ ಅವರು ಕೆಸಿಆರ್ ಅವರ ಆರೋಗ್ಯದ ಬಗ್ಗೆ ಮಾತನಾಡಿದ್ದರು. ಕೆಟಿಆರ್‌ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಕೆಸಿಆರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದರು. ಈಗ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಮೆಘಾಸ್ಟಾರ್ ಚಿರಂಜೀವಿ ಕೆಸಿಆರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಕೆಸಿಆರ್ ಆರೋಗ್ಯ ವಿಚಾರಿಸಿದ ನಾಯ್ಡು: ವೈದ್ಯರ ನಿಗಾದಲ್ಲಿರುವ ಕೆಸಿಆರ್ ಅವರನ್ನು ಟಿಡಿಪಿ ರಾಷ್ಟ್ರೀಯ ನಾಯಕ ಚಂದ್ರಬಾಬು ನಾಯ್ಡು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಇನ್ನು ಆರೇಳು ವಾರಗಳಲ್ಲಿ ಕೆಸಿಆರ್ ಬೇಗ ಚೇತರಿಸಿಕೊಳ್ಳಲಿದ್ದಾರೆ. ಅವ್ರು ಆದಷ್ಟು ಬೇಗ ಸಹಜ ಸ್ಥಿತಿಗೆ ಬರಲಿ ಎಂದು ಚಂದ್ರಬಾಬು ಹಾರೈಸಿದ್ದಾರೆ.
ಕೆಸಿಆರ್ ಅವರನ್ನು ನೋಡಲು ಬಂದೆ. ನಾನು ವೈದ್ಯರ ಬಳಿಯೂ ಮಾತನಾಡಿದೆ. ಅವರು ಚೇತರಿಸಿಕೊಳ್ಳಲು ಆರೇಳು ವಾರಗಳು ಬೇಕು ಎಂದು ಹೇಳಿದ್ದಾರೆ. ಅವರು ಹೇಳಿದ್ದನ್ನು ಕೇಳಿ ನನಗೆ ತೃಪ್ತಿಯಾಯಿತು. ಅವರು ಶೀಘ್ರವಾಗಿ ಗುಣಮುಖರಾಗಿ ಸಾರ್ವಜನಿಕ ಸೇವೆಗೆ ಬರಬೇಕೆಂದು ನಾನು ಬಯಸುತ್ತೇನೆ. ಕೆಲವೊಮ್ಮೆ ಜೀವನದಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸುತ್ತವೆ ಎಂದು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೇಳಿದರು.
ಕೆಸಿಆರ್ರನ್ನು ಭೇಟಿ ಮಾಡಿದ ಗಣ್ಯರು: ರಾಜ್ಯದ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಕೆಸಿಆರ್ರನ್ನು ಭೇಟಿ ಮಾಡಿದರು. ಕೆಸಿಆರ್ ಅವರು ಪಡೆಯುತ್ತಿರುವ ವೈದ್ಯಕೀಯ ಸೇವೆಗಳ ಬಗ್ಗೆಯೂ ಡಿಸಿಎಂ ವಿಚಾರಿಸಿದರು. ಕೆಸಿಆರ್ ಶೀಘ್ರ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಮತ್ತೊಂದೆಡೆ, ಚಿತ್ರರಂಗದ ಗಣ್ಯರಾದ ಚಿರಂಜೀವಿ ಮತ್ತು ಪ್ರಕಾಶ್ ರಾಜ್ ಅವರು ತೆಲಂಗಾಣ ಮಾಜಿ ಸಿಎಂ ಅವರನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ತಿಳಿದುಕೊಂಡರು. ಬಿಎಸ್‌ಪಿ ನಾಯಕ ಆರ್‌ಎಸ್ ಪ್ರವೀಣ್‌ಕುಮಾರ್ ಕೆಸಿಆರ್ ಅವರನ್ನು ಭೇಟಿ ಮಾಡಿದರು. ಗಣ್ಯರ ಭೇಟಿ ಹಿನ್ನೆಲೆಯಲ್ಲಿ ಸೋಮಾಜಿಗುಡದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
ಭಾನುವಾರ ಯಶೋದಾ ಆಸ್ಪತ್ರೆಗೆ ತೆರಳಿದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಕೆಸಿಆರ್ ಅವರನ್ನು ಭೇಟಿ ಮಾಡಿದ್ದರು. ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಸಿಎಂಗೆ ಸಚಿವೆ ಸೀತಕ್ಕ ಅವರು ಸಾಥ್ ನೀಡಿದ್ದರು. ಆ ಬಳಿಕ ತೆಲಂಗಾಣ ಸಚಿವರಾದ ಕೋಮಟಿ ರೆಡ್ಡಿ ವೆಂಕಟ್ ರೆಡ್ಡಿ, ಪೊನ್ನಂ ಪ್ರಭಾಕರ್, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ವಿ ಹನುಮಂತರಾವ್ ಆಸ್ಪತ್ರೆಗೆ ಭೇಟಿ ನೀಡಿ ಕೆಸಿಆರ್ ಆರೋಗ್ಯದ ಬಗ್ಗೆ ವಿಚಾರಿಸಿದರು.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್ ಮುಖ್ಯಸ್ಥ ಕೆಸಿಆರ್ ಇದೇ ಡಿ. 7ರಂದು ರಾತ್ರಿ ಸಿದ್ದಿಪೇಟ್ ಜಿಲ್ಲೆಯ ಎರ್ರವೆಲ್ಲಿಯ ಕೃಷಿ ಭೂಮಿಯಲ್ಲಿ ಕಾಲು ಜಾರಿ ಬಿದ್ದಿದ್ದರು. ಕೂಡಲೇ ಕುಟುಂಬಸ್ಥರು ಅವರನ್ನು ಹೈದರಾಬಾದ್‌ನ ಸೋಮಾಜಿಗುಡದಲ್ಲಿರುವ ಯಶೋದಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಡಾ. ಎಂ.ವಿ. ರಾವ್ ಅವರ ನಿರ್ದೇಶನದಲ್ಲಿ ಕೆಸಿಆರ್ ಅವರನ್ನು ವಿವಿಧ ಪರೀಕ್ಷೆಗೆ ಒಳಪಡಿಸಿ ಸೊಂಟದ ಮೂಳೆ ಮುರಿದಿದೆ ಎಂದು ತಿಳಿಸಿದ್ದರು. ಕೂಡಲೇ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಿ, ನ.8ರಂದು ಬೆಳಗ್ಗೆ ಹಿರಿಯ ವೈದ್ಯರ ತಂಡ ನಾಲ್ಕು ಗಂಟೆಗೂ ಹೆಚ್ಚು ಕಾಲ ಶಸ್ತ್ರ ಚಿಕಿತ್ಸೆ ನಡೆಸಿದರು. ಆರರಿಂದ ಎಂಟು ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ಓದಿ:ರಾಜ್ಯದ ಶಾಲೆಗಳಲ್ಲಿ ಮೂಲಸೌಕರ್ಯ ಸರಿಪಡಿಸದ ಕುರಿತು ಹೈಕೋರ್ಟ್ ಅಸಮಾಧಾನ