ಮುಂಬೈ:ಭಾರತದ ಅತಿದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ (ಟಿಸಿಎಸ್) ಷೇರು ಬೆಲೆ ಮಂಗಳವಾರ ಭಾರಿ ಏರಿಕೆ ಕಂಡಿದೆ. ಅಷ್ಟೇ ಅಲ್ಲ ಮಾರುಕಟ್ಟೆ ಬಂಡವಾಳ ಮೌಲ್ಯ 13 ಲಕ್ಷ ಕೋಟಿಗೆ ಏರಿಕೆ ಕಂಡು ದಾಖಲೆ ಬರೆದಿದೆ.
ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಭಾರತದಲ್ಲಿನ ಎರಡನೇ ಅತಿ ದೊಡ್ಡ ಕಂಪನಿಯಾದ ಟಿಸಿಎಸ್ ಷೇರು ಶೇ 1ಕ್ಕಿಂತ ಹೆಚ್ಚಿನ ವಹಿವಾಟು ನಡೆಸಿತು. ಮಂಗಳವಾರ ಆರಂಭದ ವಹಿವಾಟಿನಲ್ಲಿ ಬಿಎಸ್ಇಯಲ್ಲಿ ಪ್ರತಿ ಷೇರಿಗೆ 3,518 ರೂಪಾಯಿಗೆ ಹೆಚ್ಚಿಸಿಕೊಂಡಿತು. ಆ ಮೂಲಕ ಟಿಸಿಎಸ್ ಮಾರುಕಟ್ಟೆ ಬಂಡವಾಳ ಮೌಲ್ಯ 13.71 ಲಕ್ಷ ಕೋಟಿ ದಾಟಿತು. ಈ ಮೂಲಕ ರಿಯಲಯ್ಸ್ ಇಂಡಸ್ಟ್ರೀ ಬಂಡವಾಳ ಮೌಲ್ಯವನ್ನ ಹಿಂದಿಕ್ಕಿ ಮುನ್ನುಗ್ಗಿತು. ಇಂದಿನ ವಹಿವಾಟಿನಲ್ಲಿ ನಿಫ್ಟಿ ಐ.ಟಿ. ಸೂಚ್ಯಂಕವು ಶೇ 1ಕ್ಕಿಂತ ಹೆಚ್ಚಿನ ಏರಿಕೆ ಕಂಡಿತು. ಟೆಕ್ ಮಹೀಂದ್ರಾ, ಕೊಫೋರ್ಜ್, ಟಿಸಿಎಸ್, ಮೈಂಡ್ಟ್ರೀ, ಎಂಫಸಿಸ್ ಷೇರುಗಳ ಬೆಲೆಯಲ್ಲೂ ಏರಿಕೆ ಕಂಡುಬಂತು.
ಆದರೂ ಸಾಂಪ್ರದಾಯಿಕವಾಗಿ ಸಂಸ್ಥೆಗೆ ಅತ್ಯಲ್ಪ ಮಾರುಕಟ್ಟೆಯಾಗಿರುವ ಭಾರತದಲ್ಲಿಯೂ ಸಹ, ಚಟುವಟಿಕೆಯು ಕೆಲವು ಸುಧಾರಣೆಗಳ ಲಕ್ಷಣಗಳನ್ನು ತೋರಿಸುತ್ತಿದೆ ಮತ್ತು 2021-22ರ ಆರ್ಥಿಕ ವರ್ಷದ ಒಟ್ಟಾರೆ ಎರಡಂಕಿಯ ಆದಾಯ ಬೆಳವಣಿಗೆಯ ಅಂದಾಜನ್ನು ಪೂರೈಸುವ ವಿಶ್ವಾಸವನ್ನು ಹೊರಹಾಕಿತು.
ಸದ್ಯ ಐಟಿ ಪ್ರಮುಖ ಕಂಪನಿಗಳಾದ ಟಿಸಿಎಸ್ ಮತ್ತು ಇನ್ಫೋಸಿಸ್ ಮುಂಚೂಣಿಯಲ್ಲಿವೆ. 2021ರ ಜೂನ್ ಕೊನೆಗೆ ಟಿಸಿಎಸ್ ವರದಿ ಮಾಡಿದಂತೆ, ನಿವ್ವಳ ಲಾಭ ಶೇ 28.5ರಷ್ಟು ಹೆಚ್ಚಳವಾಗಿ 9008 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ 7008 ಕೋಟಿ ರೂಪಾಯಿ ಬಂದಿತ್ತು.