ನವದೆಹಲಿ: 1932ರಲ್ಲಿ ಟಾಟಾ ಏರ್‌ಲೈನ್ಸ್ ಹೆಸರಿನಲ್ಲಿ ಏರ್ ಇಂಡಿಯಾವನ್ನು ಸ್ಥಾಪಿಸಿದ್ದ ಟಾಟಾ ಗ್ರೂಪ್ 68 ವರ್ಷಗಳ ಬಳಿಕ ತನ್ನ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಅಧಿಕೃತವಾಗಿ ಇಂದು ಕೇಂದ್ರ ಸರ್ಕಾರದಿಂದ ಘೋಷಣೆ ಹೊರಬಿದ್ದಿದೆ.
18,000 ಕೋಟಿ ರೂಪಾಯಿಗೆ ಟಾಟಾ ಸನ್ಸ್ ಬಿಡ್ ಸಲ್ಲಿಕೆ ಮಾಡಿತ್ತು. ಹೆಚ್ಚು ಬಿಡ್ ಮಾಡಿದ್ದ ಟಾಟಾ ಕಂಪನಿಗೆ ಇದೀಗ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಮಾರಾಟ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾಹಿತಿ ನೀಡಿರುವ ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತ್ ಪಾಂಡೆ, ಟಾಟಾ ಸನ್ಸ್ 18,000 ಕೋಟಿ ರೂಪಾಯಿಗೆ ಹರಾಜು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಡಿಸೆಂಬರ್2021ರ ಅಂತ್ಯದ ವೇಳಗೆ ವಹಿವಾಟು ಮುಕ್ತಾಯಗೊಳ್ಳಲಿದೆ ಎಂದಿದ್ದಾರೆ.ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಬಿಡ್ ಆಗಿರುವ ಕಾರಣ ಕೇಂದ್ರ ಸರ್ಕಾರಕ್ಕೆ 2,700 ಕೋಟಿ ರೂ. ನಗದು ಸಿಗಲಿದೆ ಎಂದು ತುಹಿನ್ ಪಾಂಡೆ ತಿಳಿಸಿದ್ದಾರೆ. ಏರ್ ಇಂಡಿಯಾ 61,562 ಕೋಟಿ ರೂ. ಸಾಲದ ಸುಳಿಯಲ್ಲಿದೆ.
ಏರ್ ಇಂಡಿಯಾ ಇತಿಹಾಸ ಇಂತಿದೆ
1932ರ ಅಕ್ಟೋಬರ್ನಲ್ಲಿ 'ಟಾಟಾ ಏರ್‌ಲೈನ್ಸ್' ಹೆಸರಿನಲ್ಲಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್ ಸ್ಥಾಪಿಸಿತ್ತು. 1953 ರಲ್ಲಿ ಭಾರತ ಸರ್ಕಾರವು ಇದನ್ನು ರಾಷ್ಟ್ರೀಕರಣಗೊಳಿಸಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಏರ್ ಇಂಡಿಯಾ ವಿಮಾನಯಾನವು ಭಾರೀ ನಷ್ಟ ಅನುಭವಿಸುತ್ತಿತ್ತು. ಏರ್ ಇಂಡಿಯಾ ಸುಮಾರು 43,000 ಕೋಟಿ ರೂ. ಮೊತ್ತದ ಸಾಲ ಉಳಿಸಿಕೊಂಡಿದೆ.ಹೀಗಾಗಿ ಸರ್ಕಾರವು ವಿಮಾನಗಳ ಷೇರು ಮಾರಾಟಕ್ಕೆ ಮುಂದಾಗಿತ್ತು. 2018ರಲ್ಲಿ ಶೇ.76ರಷ್ಟು ಷೇರು ಬಿಡ್ ಮಾಡಲು ಸಿದ್ಧವಿರುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇದಕ್ಕೆ ಯಾವ ಸಂಸ್ಥೆಯೂ ಮುಂದೆ ಬಂದಿರಲಿಲ್ಲ. ಆದ್ದರಿಂದ ಈ ಬಾರಿ ಶೇ.100ರಷ್ಟು ಹಣಕಾಸು ಬಿಡ್ಗೆ ಸರ್ಕಾರ ಘೋಷಣೆ ಮಾಡಿತ್ತು.ಟಾಟಾ ಗ್ರೂಪ್ ಮತ್ತು ಸ್ಪೈಸ್ ಜೆಟ್ ಲಿಮಿಟೆಡ್ ಸರ್ಕಾರಕ್ಕೆ ಬಿಡ್ ಸಲ್ಲಿಸಿದ್ದವು. ಇದೀಗ ಟಾಟಾ ಗ್ರೂಪ್ ವಿಜೇತ ಬಿಡ್ಡರ್ ಆಗಿ ಹೊರಹೊಮ್ಮಿದ್ದು, ಏರ್ ಇಂಡಿಯಾವನ್ನ ಪುನಃ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಏರ್ ಇಂಡಿಯಾ ಮಾರಾಟ ಮಾಡುವ ಎರಡನೇ ಪ್ರಯತ್ನ ಇದಾಗಿದ್ದು, ಈ ಹಿಂದೆ 2018ರಲ್ಲೂ ವಿಮಾನಯಾನ ಸಂಸ್ಥೆ ಮಾರಾಟಕ್ಕೆ ಮುಂದಾಗಿತ್ತು.