ಪಲ್ನಾಡು(ಆಂಧ್ರ ಪ್ರದೇಶ):ಇಲ್ಲಿನ ರಂಟಚಿಂತಲ ಗ್ರಾಮದಕುಟುಂಬ ಸದಸ್ಯರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಇನ್ನೇನು ಮನೆ ತಲುಪಬೇಕು ಎನ್ನುವಷ್ಟರಲ್ಲೇ ಅಪಘಾತ ಸಂಭವಿಸಿತು. ನಿಂತ ಟ್ರಕ್‌ಗೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು 6 ಜನ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡರು. ಈ ದುರ್ಘಟನೆ ಜಿಲ್ಲೆಯ ರಂಟಚಿಂತಲ ಗ್ರಾಮದ ಬಳಿ ನಡೆದಿದೆ.
ಅಪಘಾತದ ರಭಸಕ್ಕೆ ಟಾಟಾ ಏಸ್ ವಾಹನ ಪಲ್ಟಿಯಾಗಿದ್ದು, ವಾಹನದಲ್ಲಿದ್ದವರು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ಪೊಲೀಸರು ಕೂಡಾ ದೌಡಾಯಿಸಿ ಸ್ಥಳೀಯರೊಂದಿಗೆ ರಕ್ಷಣೆಗೆ ಕೈಜೋಡಿಸಿದರು.
ಇದನ್ನೂ ಓದಿ:ಕಣಿವೆಗೆ ಉರುಳಿದ ಕಾರು: ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರ ದುರ್ಮರಣ
ನತದೃಷ್ಟ ಟಾಟಾ ಏಸ್ ವಾಹನದ ಚಾಲಕ ರಸ್ತೆಯಲ್ಲಿ ನಿಂತಿದ್ದ ಲಾರಿಯನ್ನು ಗಮನಿಸದೇ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇಬ್ಬರು ಗುರ್ಜಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು. ಮೃತರನ್ನು ಕೋಟೇಶ್ವರಿ (45), ರೋಶಮ್ಮ (65), ರಮಾದೇವಿ (50), ಕೋಟಮ್ಮ (70), ರಮಣ (50) ಮತ್ತು ಲಕ್ಷ್ಮೀನಾರಾಯಣ (35) ಎಂದು ಗುರುತಿಸಲಾಗಿದೆ. ಇತರೆ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗುಂಟೂರು ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾಚೇರ್ಲದಿಂದ ರಂಟಚಿಂತಲ ಪ್ರವೇಶದ ಆರಂಭದಲ್ಲಿ ಗೋಳಿವಾಗು ನಾಲೆ ಹರಿಯುತ್ತದೆ. ಸ್ನಾನಕ್ಕಾಗಿ ಇಲ್ಲಿ ವಾಹನಗಳನ್ನು ನಿಲ್ಲಿಸುವುದು ಸಹಜ. ಆದರೆ, ಇಲ್ಲಿ ಬೀದಿ ದೀಪಗಳಿಲ್ಲದ ಕಾರಣ ಈ ಪ್ರದೇಶ ಕಗ್ಗತ್ತಲಿನಿಂದ ಕೂಡಿರುತ್ತದೆ. ಸಮೀಪ ಬರುವವರೆಗೂ ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳು ಕಾಣಿಸುವುದಿಲ್ಲ. ಹೀಗಾಗಿ ಇಲ್ಲಿನ ಜನ ರಸ್ತೆಯಲ್ಲಿ ಪ್ರಯಾಣಿಸುವಾಗ ಅತ್ಯಂತ ಜಾಗರೂಕರಾಗಿ ಪ್ರಯಾಣಿಸುತ್ತಿರುತ್ತಾರೆ. ಟಾಟಾ ಏಸ್ ವಾಹನ ಚಾಲಕ ತಿರುವು ಪಡೆಯುತ್ತಿದ್ದ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಕರ್ನಾಟಕದಿಂದ ಅಯೋಧ್ಯೆಗೆ ಹೊರಟ ಟೆಂಪೋ ಅಪಘಾತ: 7 ಜನ ಸಾವು, 10 ಮಂದಿ ಗಂಭೀರ