ಅಲಿಗಢ( ಉತ್ತರಪ್ರದೇಶ): ಹೋಳಿ ಹಬ್ಬದಲ್ಲಿ ಮಸೀದಿಗೆ ಬಣ್ಣ ಬೀಳದಿರುವಂತೆ ತಡೆಗಟ್ಟಲು ಅಲಿಗಢಲ್ಲಿರುವ ಮಸೀದಿಯೊಂದಕ್ಕೆ ಹೋಳಿ ಹಬ್ಬದ ಮೊದಲು ಟಾರ್ಪಾಲಿನ್ ಹೊದಿಕೆ ಹಾಕಲಾಗಿದೆ. ಪೊಲೀಸ್ ಇಲಾಖೆಯ ಸೂಚನೆಯ ಮೇರೆಗೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಅಲಿಗಢದ ಅತ್ಯಂತ ಸೂಕ್ಷ್ಮ ಹಲ್ವಾಯಿಯಾ ಕ್ರಾಸ್‌ರೋಡ್‌ನಲ್ಲಿರುವ ಅಬ್ದುಲ್ ಕರೀಮ್ ಮಸೀದಿಯನ್ನು ರಾತ್ರಿ ಟಾರ್ಪಾಲಿನ್‌ನಿಂದ ಮುಚ್ಚಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಹೋಳಿ ಹಬ್ಬದಲ್ಲಿ ರಾತ್ರಿಯ ಸಮಯದಲ್ಲಿ ಈ ಮಸೀದಿಯನ್ನು ಇದೇ ರೀತಿ ಟಾರ್ಪಾಲಿನ್‌ನಿಂದ ಮುಚ್ಚಲಾಗುತ್ತಿದೆ. ಮಸೀದಿಯ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ಆಡಳಿತದ ಸೂಚನೆ ಮೇರೆಗೆ ಮಸೀದಿಗೆ ಯಾರೂ ಬಣ್ಣ ಅಥವಾ ಮಣ್ಣು ಎಸೆಯದಂತೆ ಟಾರ್ಪಾಲಿನ್‌ನಿಂದ ಮುಚ್ಚಿದ್ದೇವೆ ಎಂದರು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದಾಗಿನಿಂದ ಸುಮಾರು 6 ರಿಂದ 7 ವರ್ಷಗಳಿಂದ ಜಿಲ್ಲಾಡಳಿತದ ಸಹಾಯದಿಂದ ಮಸೀದಿಯನ್ನು ಮುಚ್ಚಲಾಗುತ್ತಿದೆ. ಮಸೀದಿಗೆ ಯಾರೂ ಬಣ್ಣ ಅಥವಾ ಕೊಳಕು ಎರಚದಂತೆ ರಕ್ಷಿಸಲು ನಾವು ಮಸೀದಿಯನ್ನು ಮುಚ್ಚುತ್ತೇವೆ ಎಂದು ನಿವಾಸಿ ಅಖೀಲ್ ಪಹಲ್ವಾನ್ ಹೇಳಿದರು.
ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ: ಭಾರತದ ಸರ್ವೋಚ್ಚ ನ್ಯಾಯಾಲಯವು ವಿವಾದಿತ ಜನ್ಮಭೂಮಿ ಬಾಬರಿ ಮಸೀದಿ ಭೂಮಿಯನ್ನು ಹಿಂದೂಗಳ ಪಾಲಿಗೆ ನೀಡಿದ ಮತ್ತು ಹೊಸ ಮಸೀದಿಯನ್ನು ನಿರ್ಮಿಸಲು ಮುಸ್ಲಿಮರಿಗೆ ಪರ್ಯಾಯ ಸ್ಥಳವನ್ನು ನೀಡಿದ ಸುಮಾರು ನಾಲ್ಕು ವರ್ಷಗಳ ನಂತರ, ಧನ್ನಿಪುರ ಮಸೀದಿಯ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಬಾಬರಿ ಮಸೀದಿ ರಾಮ ಜನ್ಮಭೂಮಿ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಧನ್ನಿಪುರ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ (ಎಡಿಎ) ಅಂತಿಮ ಅನುಮತಿ ನೀಡಿದೆ.