ನವದೆಹಲಿ:ಸೈದ್ಧಾಂತಿಕ ಸಂಘರ್ಷದಿಂದಲೇ ಹೆಚ್ಚು ಸುದ್ದಿಯಲ್ಲಿರುವ ಇಲ್ಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್ಯು) ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ತಾಂಜೇನಿಯಾದ ಅಧ್ಯಕ್ಷೆ ಸಮಿಯಾ ಸುಲುಹು ಹಸನ್ ಅವರಿಗೆ ಮಂಗಳವಾರ ಡಾಕ್ಟರೇಟ್ ನೀಡಲಾಗಿದೆ.
ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅಧ್ಯಕ್ಷೆ ಸಮಿಯಾ ಅವರು ಭಾರತ ಮತ್ತು ತಾಂಜೇನಿಯಾ ಸಂಬಂಧಗಳ ವೃದ್ಧಿ, ಆರ್ಥಿಕ, ರಾಜತಾಂತ್ರಿಕತೆಯ ಉತ್ತೇಜನ, ಪ್ರಾದೇಶಿಕ ಏಕೀಕರಣ ಮತ್ತು ಬಹುಪಕ್ಷೀಯತೆಯಲ್ಲಿ ಸಾಧಿಸಿದ ಯಶಸ್ಸಿಗೆ ಈ ಗೌರವ ನೀಡಿ ಪುರಸ್ಕರಿಸಲಾಗಿದೆ.
ಡಾಕ್ಟರೇಟ್ ಪಡೆದ ಬಳಿಕ ಮಾತನಾಡಿದ ತಾಂಜೇನಿಯಾ ಅಧ್ಯಕ್ಷೆ, ಭಾರತದ ಹಾಡು, ಸಿನಿಮಾ, ಆಹಾರ ಎಲ್ಲವೂ ನನ್ನನ್ನು ಮೋಡಿ ಮಾಡಿದೆ. ನಾನು ಮೊದಲ ಬಾರಿಗೆ ಭಾರತಕ್ಕೆ ಬಂದಾಗ ಇಂತಹ ಅನುಭೂತಿಯನ್ನು ಅನುಭವಿಸಿದ್ದೇನೆ. ದೇಶ ಎಂದಿಗೂ ಪ್ರೀತಿಯನ್ನು ಹಂಚಿದೆ. ನಾನೀಗ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಟುಂಬ ಸದಸ್ಯಳು. ಇನ್ನು ಮುಂದೆ ಭೇಟಿ ನೀಡುವಾಗ ಅತಿಥಿಯಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ಭಾರತ ಯಾವಾಗಲೂ ಸಾಥ್ ನೀಡಿದೆ. ಪರಿಣಾಮಕಾರಿ ಧನಾತ್ಮಕ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ನಾವು ಧ್ವನಿಯಾಗಬೇಕು. ಶ್ರೇಷ್ಠ ವಿಶ್ವವಿದ್ಯಾನಿಲಯದಿಂದ ನಾನು ಈ ಗೌರವಕ್ಕೆ ಪಾತ್ರವಾಗಿದ್ದು ಹೆಮ್ಮೆ ತಂದಿದೆ. ವಿದೇಶಿ ವಿಶ್ವವಿದ್ಯಾನಿಲಯವೊಂದು ನೀಡಿದ ಮೊದಲ ಗೌರವ ಇದಾಗಿದೆ ಎಂದು ಅವರು ಹೇಳಿದರು.