ಲಖನೌ (ಉತ್ತರ ಪ್ರದೇಶ):ವಿವಾದಿತ ವೆಬ್ ಸಿರೀಸ್ ತಾಂಡವ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಮನ್ಸ್ ಜಾರಿಗೊಳಿಸಿದ ನಂತರ ವೆಬ್ ಸಿರೀಸ್ ತಂಡ ಕ್ಷಮೆ ಕೋರಿದೆ.
ಈ ಕುರಿತು ವೆಬ್ ಸಿರೀಸ್ ನಿರ್ದೇಶಕ ಟ್ವೀಟ್ ಮಾಡಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾದ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ತಾಂಡವ್ನಲ್ಲಿ ಅಭಿನಯಿಸುತ್ತಿರುವ ತಾರೆಯರು ಹಾಗೂ ಸಿಬ್ಬಂದಿ ಅಧಿಕೃತ ಹೇಳಿಕೆ ಮೂಲಕ ಕ್ಷಮೆ ಕೋರಿದ್ದಾರೆ.
ಇದನ್ನೂ ಓದಿ:ನಿಗದಿಪಡಿಸಿದ ದಿನಾಂಕಕ್ಕೆ ಮುನ್ನವೇ 'ಪೊಗರು' ಬಿಡುಗಡೆಗೆ ನಿರ್ಧಾರ..!
ನಾವು ವೀಕ್ಷಕರ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದ ವೆಬ್ ಸರಣಿ ತಾಂಡವ್ ತಂಡ, ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಕುರಿತು ನಮಗೆ ಮಾಹಿತಿ ನೀಡಿತು. ಇದರಿಂದಾಗಿ ವೆಬ್ ಸಿರೀಸ್ನ ಕೆಲವೊಂದು ಅಂಶಗಳು ಕೆಲವರ ಭಾವನೆಗಳನ್ನು ನೋಯಿಸಿರುವ ಕಾರಣ ನಾವು ಕ್ಷಮೆಯಾಚಿಸುತ್ತೇವೆ ಎಂದಿದೆ.
ಇದರ ಜೊತೆಗೆ 'ತಾಂಡವ್' ಕಾಲ್ಪನಿಕ ಕಥೆಯುಳ್ಳದ್ದಾಗಿದೆ. ಈ ವೆಬ್ ಸಿರೀಸ್ನ ಪಾತ್ರಗಳು ಹಾಗೂ ಸನ್ನಿವೇಶಗಳು ಯಾವುದೇ ವ್ಯಕ್ತಿ ಅಥವಾ ಯಾವುದೇ ಸಮುದಾಯಕ್ಕೆ ಹೋಲಿಕೆಯಾದರೆ ಅದು ಸಂಪೂರ್ಣ ಕಾಕತಾಳೀಯವಾಗಿರುತ್ತದೆ ಎಂದಿದೆ.
ಇದರೊಂದಿಗೆ ನಮ್ಮ ವೆಬ್ ಸಿರೀಸ್ನಲ್ಲಿ ಯಾವುದೇ ವ್ಯಕ್ತಿ, ಜಾತಿ, ಸಮುದಾಯ, ಜನಾಂಗ, ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ನೋಯಿಸುವ ಉದ್ದೇಶವಿಲ್ಲ. ಅವರಿಗೆ ನೋವಾಗಿದ್ದರೆ ನಾವು ಭೇಷರತ್ ಕ್ಷಮೆ ಕೋರುತ್ತೇವೆ ಎಂದು ತಾಂಡವ್ ತಂಡ ಹೇಳಿದೆ.