ಕರ್ನಾಟಕ

karnataka

ETV Bharat / bharat

ಮೇಕೆದಾಟು ಅಣೆಕಟ್ಟು ನಿರ್ಮಾಣ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಮಿಳುನಾಡು ವಿರೋಧ - ಈಟಿವಿ ಭಾರತ ಕನ್ನಡ

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುತ್ತೇವೆ ಎಂಬ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ತಮಿಳುನಾಡು ಸರ್ಕಾರ ಭಾರಿ ವಿರೋಧ ವ್ಯಕ್ತಪಡಿಸಿದೆ.

ಡಿಕೆ ಶಿವಕುಮಾರ್​ ದುರೈಮುರುಗನ್
ಡಿಕೆ ಶಿವಕುಮಾರ್​ ದುರೈಮುರುಗನ್

By

Published : Jun 1, 2023, 8:37 AM IST

Updated : Jun 1, 2023, 9:01 AM IST

ಚೆನ್ನೈ: ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಧಿಕಾರದ ಗದ್ದುಗೆಗೇರಿದ ಕೆಲವೇ ದಿನಗಳಲ್ಲಿ ಕರ್ನಾಟಕ-ತಮಿಳುನಾಡು ನಡುವೆ ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಮೇಕೆದಾಟು ಯೋಜನೆಯೂ ಮುನ್ನೆಲೆಗೆ ಬಂದಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಗಳು ರಾಜಕೀಯ ಸೌಹಾರ್ದತೆ ಹೊಂದಿದ್ದರೂ ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಮಾತ್ರ ಎರಡು ರಾಜ್ಯಗಳ ನಿಲುವು ಭಿನ್ನವಾಗಿದೆ.

ಕರ್ನಾಟಕದ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನಿನ್ನೆ (ಬುಧವಾರ) ಮೇಕೆದಾಟುವಿನಲ್ಲಿ ನಾವು ಕಾವೇರಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದು ಖಚಿತ. ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಇದಕ್ಕೆ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈಮುರುಗನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ದುರೈಮುರುಗನ್ ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಿಯೇ ತೀರುತ್ತೇವೆ. ಇದಕ್ಕಾಗಿ 1,000 ಕೋಟಿ ರೂಪಾಯಿ ನಿಧಿ ನಿಗದಿಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನೆರೆಹೊರೆಯವರನ್ನು ಗೇಲಿ ಮಾಡಲಾಗುತ್ತಿದೆ. ಡಿಕೆಶಿ ಅವರಿಗೆ ಮೇಕೆದಾಟುವಿನ ಬಗ್ಗೆ ಅಧಿಕಾರಿಗಳು ಇನ್ನೂ ಸಂಪೂರ್ಣ ವಿವರಗಳನ್ನು ನೀಡಿಲ್ಲ ಎಂದೆನಿಸುತ್ತದೆ. ಕಾವೇರಿ ಸಮಸ್ಯೆ ಬಗೆಹರಿಸಲು ರಚಿಸಲಾಗಿರುವ ಕಾವೇರಿ ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಮೇಕೆದಾಟು ಆಣೆಕಟ್ಟು ನಿರ್ಮಾಣದ ಬಗ್ಗೆ ಉಲ್ಲೇಖವಾಗಿಲ್ಲ ಎಂಬುದನ್ನು ಡಿಕೆಶಿ ಅವರಿಗೆ ನೆನಪಿಸುತ್ತೇನೆ. ಈ ಯೋಜನೆ ಅಥವಾ ಇತರ ಯಾವುದೇ ಅನುಮೋದಿತವಲ್ಲದ ನಿರ್ಮಾಣವು ತಮಿಳುನಾಡಿನ ಹಿತಾಸಕ್ತಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ತಮಿಳುನಾಡಿನ ಹಕ್ಕಾಗಿರುವ ಅನಿಯಂತ್ರಿತ ಮಧ್ಯಂತರ ಜಲಾನಯನ ಪ್ರದೇಶವಾದ ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ ಎಂದು ಹೇಳಿರುವುದು ಸ್ವಾಗತಾರ್ಹವಲ್ಲ. ಒಂದು ವೇಳೆ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಮುಂದಾದರೆ ತಮಿಳುನಾಡು ಎಲ್ಲ ಹಂತಗಳಲ್ಲಿಯೂ ವಿರೋಧ ವ್ಯಕ್ತಪಡಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಶೀಘ್ರದಲ್ಲೇ ಡಿಕೆಶಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಸಚಿವರು ತಾಳ್ಮೆಯಿಂದ ಇರುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದು ದುರೈಮುರುಗನ್ ತಿಳಿಸಿದ್ದಾರೆ. ಡಿಕೆಶಿ ಅವರ ಘೋಷಣೆಗೆ ತಮಿಳುನಾಡಿನ ಅಮ್ಮಾ ಜನಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಖಂಡಿಸಿ ಟ್ವೀಟ್​ ಮಾಡಿದ್ದಾರೆ. ಕಾವೇರಿಗೆ ಅಡ್ಡಲಾಗಿ ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟುವುದಾಗಿ ಕರ್ನಾಟಕ ಉಪಮುಖ್ಯಮಂತ್ರಿಯ ಹೇಳಿಕೆ ಎರಡೂ ರಾಜ್ಯಗಳ ಹಿತಾಸಕ್ತಿ ವಿರುದ್ಧ. ಕರ್ನಾಟಕ ಸರ್ಕಾರದ ಈ ರೀತಿಯ ಹೇಳಿಕೆಗಳನ್ನು ತಡೆಯಲು ತಮಿಳುನಾಡು ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು. ಕಾವೇರಿ ನೀರನ್ನು ಹಂಚಿಕೊಳ್ಳುವ ರಾಜ್ಯಗಳ ಒಪ್ಪಿಗೆ ಇಲ್ಲದೆ ಕಾವೇರಿಗೆ ಅಡ್ಡಲಾಗಿ ಯಾವುದೇ ಅನಿಯಂತ್ರಿತ ಅಣೆಕಟ್ಟು ಕಟ್ಟಲು ಸಾಧ್ಯವಿಲ್ಲ. ಆದರೆ ಕರ್ನಾಟಕದಲ್ಲಿ ಸರ್ಕಾರಗಳು ಇದನ್ನು ನಿರಂತರವಾಗಿ ಉಲ್ಲಂಘಿಸುತ್ತಿರುವುದು ಉಭಯ ರಾಜ್ಯಗಳು ಮತ್ತು ಜನರ ನಡುವಿನ ಸಂಬಂಧಕ್ಕೆ ಒಳ್ಳೆಯದಲ್ಲ. ಕೂಡಲೇ ರಾಜ್ಯದ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಮೇಕೆದಾಟು ಮತ್ತು ತಮಿಳುನಾಡಿನ ಜನರು ಮತ್ತು ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಕಳೆದ ವರ್ಷ ವರ್ಷದ ಜನವರಿಯಲ್ಲಿ ಡಿ.ಕೆ.ಶಿವಕುಮಾರ್​ ಅವರು ಈ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿದ್ದರು. ಇದೀಗ ಪಕ್ಷ ಅಧಿಕಾರಕ್ಕೆ ಬಂದಿದ್ದು ನಿನ್ನೆ ಅಣೆಕಟ್ಟೆ ನಿರ್ಮಿಸುವ ಘೋಷಣೆ ಮಾಡಿದ್ದಾರೆ. ಮೇಕೆದಾಟು ವಿವಿಧೋದ್ದೇಶ (ಕುಡಿಯುವ ಮತ್ತು ವಿದ್ಯುತ್) ಯೋಜನೆಯಾಗಿದ್ದು ರಾಮನಗರ ಜಿಲ್ಲೆಯ ಕನಕಪುರ ಬಳಿ ಸಮತೋಲನ ಜಲಾಶಯ ನಿರ್ಮಿಸುವುದನ್ನು ಒಳಗೊಂಡಿದೆ. ಯೋಜನೆಯು ಪೂರ್ಣಗೊಂಡ ನಂತರ ಬೆಂಗಳೂರು ಮತ್ತು ನೆರೆಯ ಪ್ರದೇಶಗಳಿಗೆ (4.75 ಟಿಎಂಸಿ) ಕುಡಿಯುವ ನೀರು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಯೋಜನೆಯ ಅಂದಾಜು ವೆಚ್ಚ 9,000 ಕೋಟಿ ರೂ ಆಗಿರಲಿದೆ.

ಇದನ್ನೂ ಓದಿ:ರಾಜಸ್ಥಾನದಲ್ಲೂ ಕರ್ನಾಟಕದ ಪ್ರಯೋಗ: ಗೆಹ್ಲೋಟ್‌ ಸರ್ಕಾರದಿಂದ ಪ್ರತಿ ಮನೆಗೆ 100 ಯೂನಿಟ್‌ ವಿದ್ಯುತ್ ಫ್ರೀ!

Last Updated : Jun 1, 2023, 9:01 AM IST

ABOUT THE AUTHOR

...view details