ಚೆನ್ನೈ(ತಮಿಳುನಾಡು):ಉನ್ನತ ಶಿಕ್ಷಣದಿಂದ ಹೆಣ್ಣುಮಕ್ಕಳು ವಂಚಿತರಾಗುವುದನ್ನು ತಡೆಯಲು ಮುಂದಾಗಿರುವ ತಮಿಳುನಾಡು ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮಾಸಿಕವಾಗಿ 1 ಸಾವಿರ ರೂಪಾಯಿ ನೀಡುವ ಯೋಜನೆಯನ್ನು ಜಾರಿ ಮಾಡಿದೆ.
ಈ ಬಗ್ಗೆ ವಿಧಾನಸಭೆಗೆ ಮಾಹಿತಿ ನೀಡಿದ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್, ರಾಜ್ಯದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಅದರಂತೆ ಪ್ರತಿ ತಿಂಗಳು ವಿದ್ಯಾರ್ಥಿನಿಯರ ಖಾತೆಗೆ 1 ಸಾವಿರ ರೂ. ಸಂದಾಯವಾಗಲಿದೆ. ಇದರಿಂದ ರಾಜ್ಯದ 6 ಲಕ್ಷ ವಿದ್ಯಾರ್ಥಿನಿಯರು ಇದರ ಲಾಭ ಪಡೆಯಲಿದ್ದಾರೆ. ಇದಕ್ಕೆಂದೇ ಬಜೆಟ್ನಲ್ಲಿ 698 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು ತಿಳಿಸಿದರು.