ತೂತುಕುಡಿ (ತಮಿಳುನಾಡು ) :ಮೀನುಗಾರಿಕೆಗೆ ತೆರಳಿದ್ದ ವೇಳೆ ಮಾಲ್ಡೀವ್ಸ್ನ ಜಲಪ್ರದೇಶಕ್ಕೆ ತೆರಳಿದ ತಮಿಳುನಾಡಿನ ಮೀನುಗಾರರನ್ನು ಮಾಲ್ಡೀವ್ಸ್ನ ಕರಾವಳಿ ಕಾವಲು ಪಡೆ ಅಧಿಕಾರಿಗಳು ಬಂಧಿಸಿದ್ದಾರೆ. ಒಟ್ಟು 12 ಮೀನುಗಾರರನ್ನು ಬಂಧಿಸಿದ್ದು, 1.5 ಕೋಟಿ ಮೌಲ್ಯದ ಬಾರ್ಜ್ (ದೋಣಿ)ನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ವಾರದ ಹಿಂದೆ ಮೀನುಗಾರರನ್ನು ಬಂಧಿಸಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಲ್ಡೀವ್ಸ್ ಸರ್ಕಾರವ ಇದೇ ಮೊದಲ ಬಾರಿಗೆ ತಮಿಳುನಾಡು ಮೀನುಗಾರರನ್ನು ಬಂಧಿಸಿದೆ.
ಬಂಧನಕ್ಕೊಳಗಾಗಿರುವವರನ್ನು ರಾಮೇಶ್ವರಂನ ಉದಯಕುಮಾರ್ (31), ತೂತುಕುಡಿಯ ವೆಂಬಾರ್ನ ಮೈಕೆಲ್ ರಾಜ್ (21), ಆಂಟನಿ ಅನ್ಸೆಲ್ ಕ್ರಿಸ್ಟೋಫರ್ (22), ಆದಿಶಯ ಪರಲೋಕ ಧೀರವಿಯಂ (25 ), ಮಧುರೈನ ಮಾಧೇಶ್ ಕುಮಾರ್ (15), ಆಂಟೋನಿ ಸೆಲ್ವಶೇಖರನ್ (23), ಆದಿ ನಾರಾಯಣನ್ (20), ಮಹೇಶ್ ಕುಮಾರ್ (24) , ಅನ್ಬು ಸೂಸೈ ಮೈಕಲ್ (48), ವಿಘ್ನೇಶ್ (31) ಮತ್ತು ಮಣಿ ಶಕ್ತಿ ಎಂದು ಗುರುತಿಸಲಾಗಿದೆ. ಬಂಧಿತರು ಅಕ್ಟೋಬರ್ 1ರಂದು ತೂತುಕುಡಿ ಸಮೀಪದ ತರುವೈಕುಲಂ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ತೆರಳಿದ್ದರು.
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಬಂಧನಕ್ಕೊಳಗಾಗಿರುವ ಮೀನುಗಾರ ಆದಿ ನಾರಾಯಣ್ ತಾಯಿ ವಿಜಯಲಕ್ಷ್ಮಿ, ಅಕ್ಟೋಬರ್ 1ರಂದು ಅವರು ಮೀನು ಹಿಡಿಯಲು ಆಳ ಸಮುದ್ರಕ್ಕೆ ತೆರಳಿದ್ದರು. ಮೀನು ಹಿಡಿಯುವ ಸಂದರ್ಭ ಮಾಲ್ಡೀವ್ಸ್ನ ಜಲಪ್ರದೇಶಕ್ಕೆ ತೆರಳಿದ್ದ ಅವರನ್ನು ಅಲ್ಲಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಬಗ್ಗೆ ಮಹಿಳೆಯೊಬ್ಬರು ಕರೆ ಮಾಡಿ, ನಿಮ್ಮ ಮಗ ಸುರಕ್ಷಿತವಾಗಿದ್ದಾನೆ. ನಮ್ಮ ಪರಿಶೀಲನೆ ನಡೆದ ಕೂಡಲೇ ಅವರನ್ನು ಮರಳಿ ತಾಯ್ನಾಡಿಗೆ ಕಳುಹಿಸಲಾಗುವುದು. ಆದರೆ, ಯಾವಾಗ ಕಳುಹಿಸಲಾಗುವುದು ಎಂದು ಮಹಿಳೆ ಹೇಳಲಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಈ ಕೂಡಲೇ ಬಂಧಿತರಾಗಿರುವ ಮೀನುಗಾರರನ್ನು ಭಾರತಕ್ಕೆ ತರಬೇಕು ಎಂದು ವಿಜಯಲಕ್ಷ್ಮಿ ಒತ್ತಾಯಿಸಿದರು.