ಚೆನ್ನೈ (ತಮಿಳುನಾಡು) :370 ನೇ ವಿಧಿ ರದ್ದು ಮಾಡುವ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇಕಡಾ 10 ರಷ್ಟು ಮೀಸಲಾತಿ ನೀಡುವ ಮಸೂದೆಗಳನ್ನು ಅಂಗೀಕರಿಸುವಲ್ಲಿ ಇದ್ದ ಆತುರತೆ ಮಹಿಳಾ ಮೀಸಲಾತಿ ಮಸೂದೆಯ ಜಾರಿಯಲ್ಲಿ ಏಕಿಲ್ಲ? ಎಂದು ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲಿ ಮಂಗಳವಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದರೆ ಬಗ್ಗೆ ಮಾತನಾಡಿದ ಅವರು, ಈಗ ಮಂಡಿಸಲಾಗಿರುವ ಮಸೂದೆ 2029 ರಲ್ಲಿ ಜಾರಿಗೆ ಬರಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಹಾಗಾದರೆ, ಈಗ ಅದನ್ನು ಸಂಸತ್ತಿನಲ್ಲಿ ತಂದ ಉದ್ದೇಶವೇನು?. ರಾಜಕೀಯ ಲಾಭಕ್ಕಾಗಿ ಸರ್ಕಾರ ಇಂತಹ ಗಿಮಿಕ್ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಜನಗಣತಿ, ಕ್ಷೇತ್ರ ಪುನರ್ ವಿಂಗಡಣೆ ಕಾರ್ಯ ಮುಗಿಯದೇ ಮಹಿಳಾ ಮೀಸಲಾತಿಯನ್ನು ಜಾರಿ ತರಲು ಅಸಾಧ್ಯ. ಅದು ತಿಳಿದಿದ್ದೂ ಸರ್ಕಾರ ಮಸೂದೆಯನ್ನು ಈಗ ಸುಖಾಸುಮ್ಮನೆ ಲೋಕಸಭೆಯಲ್ಲಿ ಮಂಡಿಸಿದೆ. ಇದು ಮಹಿಳೆಯರ ಸಬಲೀಕರಣಕ್ಕಾಗಿ ತಂದ ವಿಧೇಯಕ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅದರ ಜಾರಿಯ ನಿಖರತೆಯನ್ನು ಅವರು ಹೇಳಿಲ್ಲ ಎಂದು ಟೀಕಿಸಿದರು.
ದಕ್ಷಿಣ ಭಾರತದವರಿಗೆ ಮೋಸ ಆಗಬಾರದು:ಮಂಡಿಸಲಾಗಿರುವ ಮಸೂದೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸರಿಯಾದ ಕೋಟಾ ಸಿಗಲಿದೆ ಎಂಬುದನ್ನು ಖಾತ್ರಿಪಡಿಸಬೇಕು. ಜೊತೆಗೆ ದಕ್ಷಿಣ ಭಾರತದ ರಾಜ್ಯಗಳಿಗೆ ಮೀಸಲಾತಿಯಲ್ಲಿ ಅನ್ಯಾಯವಾಗುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.