ಚೆನ್ನೈ (ತಮಿಳುನಾಡು): ತಮಿಳುನಾಡು ಎನ್ನುವುದಕ್ಕಿಂತ ತಮಿಳಗಂ ಎಂಬುದು ರಾಜ್ಯಕ್ಕೆ ಹೆಚ್ಚು ಸೂಕ್ತವಾದ ಹೆಸರು ಎಂದು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರ ಹೇಳಿಕೆಯು ದೊಡ್ಡ ಮಟ್ಟದ ವಿವಾದ ಸೃಷ್ಟಿಸಿದೆ. ಈ ಮಧ್ಯೆ ಪಶ್ಚಿಮ ಚೆನ್ನೈನ ವಳ್ಳುವರ್ ಕೊಟ್ಟಂ ಮತ್ತು ಅಣ್ಣಾ ಸಲೈ ಪ್ರದೇಶಗಳಲ್ಲಿ '#ಗೆಟೌಟ್ ರವಿ' (#Getout Ravi) ಎಂದು ಬರೆದಿರುವ ಪೋಸ್ಟರ್ಗಳು ಕಾಣಿಸಿಕೊಂಡಿದೆ. ರಾಜ್ಯಪಾಲರ ಹೇಳಿಕೆ ವಿವಾದದ ನಡುವೆ ಕಳೆದ ಕೆಲ ದಿನಗಳಿಂದ ಟ್ವಿಟರ್‌ನಲ್ಲಿ '#ಗೆಟೌಟ್ ರವಿ' ಟಾಪ್ ಟ್ರೆಂಡ್ ಆಗಿದೆ.
ಇನ್ನು ಸೋಮವಾರದಂದು ತಮಿಳುನಾಡು ವಿಧಾನಸಭೆಯ ಉದ್ಘಾಟನಾ ಅಧಿವೇಶನದಲ್ಲಿ ರಾಜ್ಯಪಾಲರು ತಮ್ಮ ವಾಡಿಕೆ ಭಾಷಣಕ್ಕೆ ಆಗಮಿಸುತ್ತಿದ್ದಂತೆ ಸದನದಲ್ಲಿ ಗದ್ದಲ, ಪ್ರತಿಭಟನೆಗಳು ಆರಂಭವಾದವು. ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಸದಸ್ಯರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿ ನಂತರ ವಿಧಾನಸಭೆಯಿಂದ ವಾಕೌಟ್ ಮಾಡಿದರು. ಡಿಎಂಕೆ ಶಾಸಕರು ‘ಬಿಜೆಪಿ, ಆರೆಸ್ಸೆಸ್ ಸಿದ್ಧಾಂತ ಹೇರಬೇಡಿ’ ಎಂಬ ಘೋಷಣೆಗಳನ್ನು ಕೂಗಿದರು.
ಡಿಎಂಕೆ ಮತ್ತು ಮಿತ್ರಪಕ್ಷಗಳು ರಾಜ್ಯಪಾಲರ ನಿಲುವನ್ನು ವಿರೋಧಿಸಿದ್ದು, ಅವರು ಬಿಜೆಪಿಯ ಸೈದ್ಧಾಂತಿಕ ನಿಲುವಿಗೆ ಅಂಟಿಕೊಂಡಿದ್ದಾರೆ ಎಂದು ಆರೋಪಿಸಿದವು. ಇದು ನಾಗಾಲ್ಯಾಂಡ್ ಅಲ್ಲ, ಇದು ನಮ್ಮ ಹೆಮ್ಮೆಯ ತಮಿಳುನಾಡು ಎಂದು ಶಾಸಕರು ಘೋಷಣೆ ಕೂಗಿದರು. ಆದರೆ, ಗದ್ದಲದ ನಡುವೆಯೇ ರಾಜ್ಯಪಾಲ ರವಿ ಭಾಷಣ ಮುಂದುವರಿಸಿದರು. ಆನ್‌ಲೈನ್ ಜೂಜಾಟವನ್ನು ನಿಷೇಧಿಸಬೇಕೆಂದು ಪ್ರತಿಪಕ್ಷಗಳ ಸದಸ್ಯರು ಈ ಮಧ್ಯೆ ಆಗ್ರಹಿಸಿದರು.
ಆನ್‌ಲೈನ್ ಜೂಜಾಟವನ್ನು ನಿಷೇಧಿಸುವ ಮಸೂದೆಯನ್ನು ರಾಜ್ಯಪಾಲರು ತಡೆಹಿಡಿದಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕರು ಆರೋಪಿಸಿದರು. ಆನ್‌ಲೈನ್ ಜೂಜು ಮತ್ತು ಪಂದ್ಯ ಆಧಾರಿತ ಆನ್‌ಲೈನ್ ಆಟಗಳನ್ನು ನಿಷೇಧಿಸುವ ಮಸೂದೆಗೆ ರಾಜ್ಯಪಾಲರ ಒಪ್ಪಿಗೆ ಬಾಕಿ ಇದ್ದು, ಈ ವಿಚಾರದಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ರಾಜಭವನದ ನಡುವೆ ಜಟಾಪಟಿ ನಡೆಯುತ್ತಿದೆ. ಒಟ್ಟಾರೆಯಾಗಿ, ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟ 21 ಮಸೂದೆಗಳು ಡಿಸೆಂಬರ್ 2022 ರ ಹೊತ್ತಿಗೆ ರಾಜಭವನದಲ್ಲಿ ಬಾಕಿ ಉಳಿದಿವೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ರಾಜ್ಯವನ್ನು ವಾಸ್ತವಿಕವದಲ್ಲಿ ತಮಿಳಗಂ ಎಂದು ಕರೆಯಬೇಕೆಂಬ ರಾಜ್ಯಪಾಲ ರವಿ ಅವರ ಸಲಹೆಯಿಂದ ವಿವಾದ ಉಂಟಾಗಿದೆ. ತಮಿಳುನಾಡು ಎಂದರೆ ಮೂಲತಃ ತಮಿಳು ‘ಭೂಮಿ’ ಎಂದರ್ಥ. ಅದನ್ನು ಈಗ ‘ತಮಿಳು ದೇಶ’ ಎಂದೂ ಅರ್ಥೈಸಲಾಗುತ್ತದೆ. ಮತ್ತೊಂದೆಡೆ, 'ತಮಿಳಗಂ' ಎಂದರೆ ತಮಿಳು ಜನರ 'ವಾಸಸ್ಥಾನ' ಅಥವಾ 'ಭೂಮಿ' ಎಂದಾಗುತ್ತದೆ. ಇದು ಪ್ರಾಚೀನ ತಮಿಳು ದೇಶದ ಹೆಸರಾಗಿದೆ.
ಜನವರಿ 4 ರಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯಪಾಲರು, ತಮಿಳುನಾಡಿನಲ್ಲಿ ವಿಭಿನ್ನ ರೀತಿಯ ನಿರೂಪಣೆಯನ್ನು ರಚಿಸಲಾಗಿದೆ ಎಂದು ಹೇಳಿದ್ದರು. ಇಡೀ ದೇಶಕ್ಕೆ ಅನ್ವಯಿಸುವ ಎಲ್ಲವನ್ನೂ ತಮಿಳುನಾಡು ತಿರಸ್ಕರಿಸುತ್ತದೆ. ಹೇಳುತ್ತದೆ. ಇದು ಅಭ್ಯಾಸವಾಗಿ ಹೋಗಿದೆ. ಅನೇಕ ಸುಳ್ಳು ಪ್ರಬಂಧಗಳನ್ನು ಬರೆಯಲಾಗಿದೆ. ಇದನ್ನು ತೊಡೆದುಹಾಕಬೇಕಿದೆ. ಸತ್ಯಕ್ಕೆ ಜಯ ಸಿಗಬೇಕು. ತಮಿಳಗಂ ಇದು ಕರೆಯಲು ಹೆಚ್ಚು ಸೂಕ್ತವಾದ ಪದ. ದೇಶದ ಉಳಿದ ಭಾಗಗಳು ದೀರ್ಘಕಾಲದವರೆಗೆ ವಿದೇಶಿಯರ ಕೈಯಲ್ಲಿ ಸಾಕಷ್ಟು ವಿನಾಶವನ್ನು ಅನುಭವಿಸಿದವು ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಯುವ ಪದಾಧಿಕಾರಿಗಳ ಸಭೆಯಲ್ಲಿ ಹಾಡು ಹಾಡಿದ ಸಂಸದೆ.. ಇವರಿಗೆ ವರ ಬೇಕಂತೆ..!