ಕೊಯಮತ್ತೂರು(ತಮಿಳುನಾಡು):ತಾಯಿಯ ಎದೆಹಾಲು ಅಮೃತಕ್ಕೆ ಸಮ. ಅಂತಹ ಸ್ತನ್ಯಾಮೃತದ ಕೊರತೆ ಉಲ್ಬಣಿಸಿದ್ದು, ದಾನಿಗಳ ಮೊರೆ ಹೋಗುವುದು ಹೆಚ್ಚಾಗಿದೆ. ತಮಿಳುನಾಡಿನ ಮಹಿಳೆಯೊಬ್ಬರು 10 ತಿಂಗಳಲ್ಲಿ 55 ಲೀಟರ್ ಎದೆಹಾಲು ದಾನ ಮಾಡಿ ದಾಖಲೆ ಬರೆದಿದ್ದಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಈ ತಾಯಿಯ ಹೆಸರು ಅಚ್ಚೊತ್ತಿದ ಬಳಿಕ, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲೂ ಸ್ಥಾನ ಪಡೆದು ಪದಕ ಸಿಕ್ಕಿದೆ.
ತಮಿಳುನಾಡಿನ ಕೊಯಮತ್ತೂರು ಪ್ರದೇಶದವರಾದ ಸಿಂಧು ಮೋನಿಕಾ ಎಂಬುವವರೇ ಈ ದಾಖಲೆ ಬರೆದ ಮಹಾತಾಯಿ. ಪ್ರೊಫೆಸರ್ ಪತ್ನಿಯಾಗಿರುವ ಇವರಿಗೆ ಒಂದು ವರ್ಷದ ಮಗುವಿದೆ. ಎದೆಹಾಲು ಕೊರತೆಯ ಬಗ್ಗೆ ಅರಿತಿದ್ದ ಸಿಂಧು ಅವರು, ಸೋಷಿಯಲ್ ಮೀಡಿಯಾದಲ್ಲಿ ಎದೆಹಾಲು ದಾನ ಮಾಡುವುದನ್ನು ಕಂಡುಕೊಂಡರು. ಬಳಿಕ ಅಮೃತಂ ಎದೆಹಾಲು ದಾನ ಸಂಸ್ಥೆ ಸಂಪರ್ಕಿಸಿ ಸ್ತನ್ಯಾಮೃತವನ್ನು ನೀಡಲು ಒಪ್ಪಿದ್ದಾರೆ.
ಬಳಿಕ ಸಿಂಧು ಮೋನಿಕಾ ಅವರು ತಾಯಿಯ ಎದೆಹಾಲನ್ನು ಹೇಗೆ ಶೇಖರಿಸಿಡಬೇಕು ಮತ್ತು ಅದನ್ನು ಸುರಕ್ಷಿತವಾಗಿಡುವುದು ಹೇಗೆ ಎಂಬ ಬಗ್ಗೆ ಸಲಹೆ ಪಡೆದು, ಕಳೆದ 10 ತಿಂಗಳಿಂದ 55 ಲೀಟರ್ ಎದೆಹಾಲನ್ನು ಸಂಗ್ರಹಿಸಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ನೀಡಿದ್ದಾರೆ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಅಲ್ಲದೇ ಈ ಭವ್ಯ ಸಾಧನೆಯನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಿಸಿ ಪ್ರಮಾಣ ಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಗಿದೆ.