ಕೊಯಮತ್ತೂರು (ತಮಿಳುನಾಡು): ಈಗಾಗಲೇ ಕೊರೊನಾ ಹಾಗೂ ಡೆಂಘೀ ವಿರುದ್ಧ ಹೋರಾಡುತ್ತಿರುವ ತಮಿಳುನಾಡಿಗೆ ಹಂದಿ ಜ್ವರದ ಭೀತಿ ಎದುರಾಗಿದೆ. ಕೊಯಿಮತ್ತೂರಿನಲ್ಲಿ ಎರಡು ಹಂದಿ ಜ್ವರ (Swine Flu cases in Coimbatore) ಅಥವಾ ಹೆಚ್1ಎನ್1 (H1N1) ಪ್ರಕರಣಗಳು ಪತ್ತೆಯಾಗಿದೆ.
ಭಾನುವಾರ ಪೀಲಮೇಡು ಮೂಲದ 68 ವರ್ಷದ ವೃದ್ಧೆ ಮತ್ತು ಆರ್‌ಎಸ್ ಪುರಂನ 63 ವರ್ಷದ ವೃದ್ಧೆಗೆ ಹೆಚ್1ಎನ್1 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇಬ್ಬರನ್ನೂ ಪೀಲಮೇಡುವಿನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಬ್ಬರೂ ನಗರದ ಬೇರೆ ಬೇರೆ ಭಾಗಗಳಿಂದ ಬಂದವರಾಗಿದ್ದರಿಂದ ಇವರಿಬ್ಬರ ನಡುವೆ ಯಾವುದೇ ಸಂಪರ್ಕವಿಲ್ಲ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇವರಿಬ್ಬರು ಕೋವಿಡ್-19 ಲಕ್ಷಣಗಳನ್ನು ಹೊಂದಿದ್ದರಿಂದ ಮೊದಲು ಇವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಕೋವಿಡ್ ವರದಿ ನೆಗೆಟಿವ್ ಬಂದಿತ್ತು. ಬಳಿಕ ಹೆಚ್1ಎನ್1 ಪರೀಕ್ಷೆ ನಡೆಸಲಾಗಿದೆ. ಸೋಂಕಿತರ ಸಂಪರ್ಕಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಟ್ಯಾಮಿಫ್ಲೂ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.