ಚೆನ್ನೈ:ತಮಿಳುನಾಡು ವಿಧಾನಸಭಾಧ್ಯಕ್ಷ ಹಾಗೂ ಡಿಎಂಕೆ ನಾಯಕ ಎಂ.ಅಪ್ಪಾವು ಅವರು ತಿಂಗಳ ಹಿಂದೆ ಮಾಡಿದ್ದ ಕ್ರಿಶ್ಚಿಯನ್ನರ ಓಲೈಕೆಯ ಭಾಷಣ ಇದೀಗ ವೈರಲ್ ಆಗಿದ್ದು, ವಿವಾದವೆಬ್ಬಿಸಿದೆ. ತಮಿಳುನಾಡಿನ ಅಭಿವೃದ್ಧಿಗೆ ಕ್ರಿಶ್ಚಿಯನ್ನರೇ ಕಾರಣ. ಕ್ಯಾಥೋಲಿಕರು ಇಲ್ಲದಿದ್ದರೆ ರಾಜ್ಯ ಬಿಹಾರವಾಗುತ್ತಿತ್ತು ಎಂದು ಹೇಳಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.
ಕಳೆದ ತಿಂಗಳು ಜೂನ್ 28 ರಂದು ತಿರುಚಿರಾಪಳ್ಳಿಯಲ್ಲಿರುವ ಸೇಂಟ್ ಪಾಲ್ ಸೆಮಿನರಿಯ ಶತಮಾನೋತ್ಸವ ಆಚರಣೆಯಲ್ಲಿ ಅಪ್ಪಾವು ಅವರು ಭಾಗವಹಿಸಿ ಮಾತನಾಡಿದ್ದರು. ಈ ವೇಳೆ, ಕ್ರಿಶ್ಚಿಯನ್ ಫಾದರ್ ಮತ್ತು ಸಿಸ್ಟರ್ಸ್ ಇಲ್ಲದಿದ್ದರೆ ತಮಿಳುನಾಡು ಬಿಹಾರದಂತಾಗುತ್ತಿತ್ತು. ಸರ್ಕಾರವೇ ನಿಮ್ಮದು. ನಿಮ್ಮ ಪ್ರಾರ್ಥನೆ ಮತ್ತು ಉಪವಾಸವೇ ಈ ಸರ್ಕಾರ ರಚನೆಗೆ ಕಾರಣ ಎಂದೆಲ್ಲಾ ಹಾಡಿಹೊಗಳಿದ್ದಾರೆ.
ಕ್ಯಾಥೋಲಿಕ್ ಕ್ರಿಶ್ಚಿಯನ್ನರು ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ. ನಿಮ್ಮದೇನೇ ಸಮಸ್ಯೆಗಳಸಿದ್ದರೂ ಅವುಗಳನ್ನು ಪಟ್ಟಿ ಮಾಡಿ ನೇರವಾಗಿ ಮುಖ್ಯಮಂತ್ರಿಗೆ ನೀಡಿ. ಅವರು ಏನನ್ನೂ ನಿರಾಕರಿಸುವುದಿಲ್ಲ. ಕಾರಣ ಈ ಸರ್ಕಾರ ಉಳಿಯಲು ನೀವೇ ಕಾರಣ ಎಂದು ಮುಖ್ಯಮಂತ್ರಿಗೆ ತಿಳಿದಿದೆ. ತಮಿಳುನಾಡಿನಿಂದ ಕ್ರಿಶ್ಚಿಯನ್ನರನ್ನು ತೊಲಗಿಸಿದರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ತಮಿಳುನಾಡಿನ ಅಭಿವೃದ್ಧಿಗೆ ಕ್ಯಾಥೋಲಿಕ್ ಕ್ರಿಶ್ಚಿಯನ್ನರೇ ಮುಖ್ಯ ಕಾರಣ. ತಮಿಳುನಾಡು ಉಳಿದಿರುವುದೇ ನಿಮ್ಮಿಂದ ಎಂದು ಹೇಳಿದ್ದರು.