ಚೆನ್ನೈ:ಕನ್ಯಾಕುಮಾರಿ ಸಮುದ್ರ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ವಿಶೇಷವಾಗಿ ತಿರುನಲ್ವೇಲಿ, ತೂತುಕುಡಿ, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಇದರಿಂದಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ. ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಹೀಗೆ ತೊಂದರೆಗೆ ಸಿಲುಕಿರುವ ಸಾರ್ವಜನಿಕರಿಗೆ ಸಹಾಯ ಮಾಡಲು ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ತೀವ್ರ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭಾರತೀಯ ನೌಕಾಪಡೆಯು ಟುಟಿಕೋರಿನ್ ಜಿಲ್ಲೆಯಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಲು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಮಿಳುನಾಡಿದ ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಪರಿಸ್ಥಿತಿ ನಿಭಾಯಿಸಲು ತಮಿಳುನಾಡು ಸರ್ಕಾರ ಭಾರತೀಯ ನೌಕಾಪಡೆಯ ಸಹಾಯ ಕೋರಿದೆ. ಹೀಗಾಗಿ, ರಾಮನಾಥಪುರಂನ ಐಎನ್‌ಎಸ್ ಪರುಂಡು ನಿಲ್ದಾಣದಿಂದ ಎಎಲ್‌ಎಚ್ ಹೆಲಿಕಾಪ್ಟರ್ ಮೂಲಕ ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಭಾರತೀಯ ನೌಕಾಪಡೆಯ ಎರಡು ಟೋರ್ನಿಯರ್ ವಿಮಾನಗಳು ಟುಟಿಕೋರಿನ್ ವಿಮಾನ ನಿಲ್ದಾಣಕ್ಕೆ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ಮಧುರೈ ವಿಮಾನ ನಿಲ್ದಾಣದಲ್ಲಿ ಸನ್ನದ್ದವಾಗಿರಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸಲಾಗಿದೆ. ಇಲ್ಲಿಗೆ ಸುಮಾರು 410 ಕೆಜಿ ತೂಕದ ಪರಿಹಾರ ಸಾಮಗ್ರಿಗಳನ್ನು ನೌಕಾಪಡೆಯ ವಿಮಾನಗಳ ಮೂಲಕ ಪೂರೈಕೆ ಮಾಡಲಾಗಿದೆ. ಇಂದು ಸುಮಾರು 3.5 ಟನ್ ತೂಕದ ಪರಿಹಾರ ಸಾಮಗ್ರಿಗಳನ್ನು ಟುಟಿಕೋರಿನ್‌ಗೆ ಕೊಂಡೊಯ್ಯಬೇಕಿದೆ.