ಚೆನ್ನೈ: ತಮಿಳುನಾಡಲ್ಲಿ ಚುನಾವಣಾ ಕಣ ರಂಗೇರಿದೆ. ಡಿಎಂಕೆ ಜೊತೆ ಕಾಂಗ್ರೆಸ್, ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿಯೊಂದಿಗೆ ಅಖಾಡಕ್ಕಿಳಿಯುತ್ತಿವೆ. ಈ ನಡುವೆ ನಟ ಕಂ ರಾಜಕಾರಣಿ ಕಮಲ್ ಹಾಸನ್ ಸಹ ತಮ್ಮ ಪಕ್ಷದೊಂದಿಗೆ ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಕಮಲ್ ಹಾಸನ್ರ ಎಂಎನ್ಎಂ 154 ಸ್ಥಾನಗಳಿಗೆ ಸ್ಪರ್ಧಿಸಲು ಸೀಟು ಹಂಚಿಕೆ ಒಪ್ಪಂದ ಅಂತಿಮ - ಎಂಎನ್‌ಎಂ ಸೀಟು ಹಂಚಿಕೆ ಒಪ್ಪಂದ ಅಂತಿಮ
ನಟ ಕಂ ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯ್ಯಮ್ (ಎಂಎನ್ಎಂ) ಪಕ್ಷವು ಮುಂಬರುವ ತಮಿಳುನಾಡು ಚುನಾವಣೆಗೆ ತನ್ನ ಮೈತ್ರಿ ಪಕ್ಷಗಳೊಂದಿಗೆ ಸೀಟು ಹಂಚಿಕೆ ಮಾತುಕತೆ ಅಂತಿಮಗೊಳಿಸಿದೆ. 234 ವಿಧಾನಸಭಾ ಸ್ಥಾನಗಳ ಪೈಕಿ 154 ರಲ್ಲಿ ಎಂಎನ್ಎಂ ಸ್ಪರ್ಧಿಸಲಿದೆ.
ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯ್ಯಮ್(ಎಂಎನ್ಎಂ) ಒಟ್ಟು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಬೇಕು ಎಂಬುದರ ಬಗ್ಗೆ ಸೀಟು ಹಂಚಿಕೆ ಅಂತಿಮಗೊಳಿಸಿದೆ. ಎಂಎನ್ಎಂ 154ರಲ್ಲಿ ಕಣಕ್ಕಿಳಿಯಲಿದೆ. ಉಳಿದ 80 ಸ್ಥಾನಗಳಲ್ಲಿ, ಎಂಎನ್ಎಂ ಮೈತ್ರಿಗಳಾದ ಅಖಿಲ ಭಾರತ ಸಮತುವಾ ಮಕ್ಕಳ್ ಕಚ್ಚಿ (AISMK) ಆರ್. ಸರಥ್‌ಕುಮಾರ್ ಮತ್ತು ಟಿ.ಆರ್. ಪರಿವೇಂದ್ರರ ಇಂಧಿಯಾ ಜನನಾಯಾಗ ಕಚ್ಚಿ (IJK)- ತಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ನಿನ್ನೆ ರಾತ್ರಿ ಈ ಸೀಟು ಹಂಚಿಕೆ ಅಂತಿಮಗೊಳಿಸಲಾಗಿದೆ. ಆದರೆ, ಕಮಲ್ ಹಾಸನ್ ಸೀಟ್ ಹಂಚಿಕೆ ಬಗ್ಗೆ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿಲ್ಲ.
ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ 234 ಸ್ಥಾನಗಳಿಗೆ ಮತದಾನ ನಡೆಯಲಿದೆ.