ಚೆನ್ನೈ (ತಮಿಳುನಾಡು) :ರೌಡಿಸಂ ಸಮಾಜಕ್ಕೆ ಅಂಟಿದ ಪಿಡುಗಾಗಿದೆ. ಅದರ ನಾಶಕ್ಕೆ ಎಷ್ಟೇ ಪ್ರಯತ್ನಗಳು ನಡೆಸಿದರೂ, ಅದು ಮತ್ತಷ್ಟು ಬೆಳೆಯುತ್ತಲೇ ಇರುತ್ತದೆ. ಚೆನ್ನೈನಲ್ಲಿ ಪೊಲೀಸರು ಬುಧವಾರ ಬೆಳಗ್ಗೆ ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಕುಖ್ಯಾತ ರೌಡಿಗಳು ಹತ್ಯೆಯಾಗಿದ್ದಾರೆ. ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಕುಖ್ಯಾತ ಗೂಂಡಾಗಳಾದ ರಘುವರನ್ ಮತ್ತು ಕರುಪ್ಪು ಅಶೋಕ್ ಹತ್ಯೆಯಾದವರು. ಕಾಂಚೀಪುರಂನಲ್ಲಿ ಇಂದು ಬೆಳಗ್ಗೆ ಕೆಲ ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರನ್ನು ಬಂಧಿಸಲು ತೆರಳಿದಾಗ ಪ್ರತಿರೋಧ ಒಡ್ಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಜೊತೆಗೆ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಇಬ್ಬರೂ ರೌಡಿಗಳು ಬಲಿಯಾಗಿದ್ದಾರೆ.
ಈ ವೇಳೆ, ಗೂಂಡಾಗಳ ದಾಳಿಯಿಂದ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಅವರನ್ನು ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ ಮೂವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಖ್ಯಾತ ರೌಡಿ ಪ್ರಭಾ ಎಂಬಾತನನ್ನು ಕಾಂಚೀಪುರಂನಲ್ಲಿ ಹತ್ಯೆ ಮಾಡಲಾಗಿತ್ತು.
ಉತ್ತರಪ್ರದೇಶ ಎನ್ಕೌಂಟರ್:ಉತ್ತರಪ್ರದೇಶದ ಮಥುರಾದಲ್ಲಿ ಈಚೆಗೆ ವ್ಯಕ್ತಿಯೊಬ್ಬರ ಕೊಲೆ, ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು. ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್ ಬಳಿ ಆರೋಪಿಯನ್ನು ಬೆನ್ನಟ್ಟಿ ಹಿಡಿಯುತ್ತಿರುವಾಗ ಶೂಟೌಟ್ ಮಾಡಲಾಗಿತ್ತು.
ಇಲ್ಲಿನ ದರ್ವಾಜಾ ನಿವಾಸಿ ಫಾರೂಖ್ ಹತನಾದ ಆರೋಪಿ. ಫಾರೂಖ್ ತನ್ನ ಸಹಚರ ಮೊಹ್ಸಿನ್ ಎಂಬಾತನ ಜೊತೆ ಸೇರಿಕೊಂಡು ನವೆಂಬರ್ 4 ರಂದು ಉದ್ಯಮಿ ಕೃಷ್ಣ ಕುಮಾರ್ ಅಗರ್ವಾಲ್ ಮತ್ತು ಅವರ ಪತ್ನಿ ಕಲ್ಪನಾ ಅಗರ್ವಾಲ್ ಮೇಲೆ ದಾಳಿ ಮಾಡಿ, ಅವರ ನಿವಾಸದಲ್ಲಿ ಲೂಟಿ ಮಾಡಿದ್ದ. ಈ ವೇಳೆ ಉದ್ಯಮಿ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ. ಅವರ ಪತ್ನಿ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದರು.
ಆರೋಪಿ ತಲೆಗೆ 50 ಸಾವಿರ:ಈ ಬಗ್ಗೆ ದೂರು ದಾಖಲಾಗಿದ್ದು, ಹೆದ್ದಾರಿ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿಗಳಾದ ಫಾರೂಖ್ ಮತ್ತು ಮೊಹ್ಸಿನ್ ಬಂಧನಕ್ಕೆ ಜಾಲ ಬೀಸಿದ್ದರು. ಅಲ್ಲದೇ, ಫಾರೂಖ್ ತಲೆಗೆ 50 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ತಲೆಮರೆಸಿಕೊಂಡು ತಿರುಗುತ್ತಿದ್ದ ಫಾರೂಖ್ ಮಥುರಾದಲ್ಲಿ ಕಾಣಿಸಿಕೊಂಡ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ತಪ್ಪಿಸಿಕೊಳ್ಳುವ ವೇಳೆ ಗುಂಡಿನ ದಾಳಿ ಮಾಡಿ ಎನ್ಕೌಂಟರ್ ಮಾಡಿದ್ದರು.
ಇದನ್ನೂ ಓದಿ:ದೆಹಲಿ: ಇಸ್ರೇಲ್ ರಾಯಭಾರಿ ಕಚೇರಿ ಸಮೀಪ ಸ್ಫೋಟ, ಘಟನಾ ಸ್ಥಳದಲ್ಲಿ ಪತ್ರ ಪತ್ತೆ