ಚೆನ್ನೈ (ತಮಿಳುನಾಡು): ಕೇಂದ್ರ ಜಾರಿ ಮಾಡಲು ಮುಂದಾಗಿರುವ ಭಾರತೀಯ ಬಂದರು ಕಾಯ್ದೆಯ 2021ರ ಕರಡು ಮಸೂದೆಯನ್ನು ತಮಿಳುನಾಡು ಲೋಕೋಪಯೋಗಿ, ಬಂದರು ಮತ್ತು ಹೆದ್ದಾರಿ ಇಲಾಖೆ ಸಚಿವ ಇ.ವಿ. ವೇಲು ವಿರೋಧಿಸಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ 18 ನೇ ಕಡಲ ರಾಜ್ಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಬಂದರುಗಳ ವಿಷಯಗಳಲ್ಲಿ ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಸಂಬಂಧಿಸಿದಂತೆ ಪ್ರಸ್ತುತ ವ್ಯವಸ್ಥೆಗೆ ತೊಂದರೆಯಾಗಬಾರದು ಎಂದು ಪ್ರತಿಪಾದಿಸಿದ್ದಾರೆ.
ಈ ಕರಡು ಮಸೂದೆಯು ಸಣ್ಣ ಬಂದರುಗಳ ನಿಯಂತ್ರಕವಾಗಿ ಕಾರ್ಯನಿರ್ವಹಿಸಲು ಆರಂಭಿಸಲಿದೆ. ಎಂಎಸ್ಡಿಸಿಯ ಸಂಯೋಜನೆಯನ್ನ ರಾಜ್ಯ ಸರ್ಕಾರಗಳಲ್ಲದೆ ಕೇಂದ್ರ ಸರ್ಕಾರದ ಅಧಿಕಾರಿಗಳ ಸೇರ್ಪಡೆಯೊಂದಿಗೆ ಮಾರ್ಪಡಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ. ಪ್ರಸ್ತುತ ನಿಯಮದ ಪ್ರಕಾರ ಸಣ್ಣ ಬಂದರುಗಳ ಕಾರ್ಯ ವ್ಯಾಪ್ತಿಯು ಆಯಾ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ಈ ಮಸೂದೆಯಿಂದಾಗಿ ಈ ಅಧಿಕಾರವು ಕೇಂದ್ರ ಸರ್ಕಾರದ ಪಾಲಾಗಲಿದೆ ಎಂದಿದ್ದಾರೆ.
ಪ್ರಸ್ತುತ, ರಾಜ್ಯ ಕಡಲ ಮಂಡಳಿಯ ಆದೇಶದ ವಿರುದ್ಧ ಮೇಲ್ಮನವಿ ಅಧಿಕಾರವು ಆಯಾ ರಾಜ್ಯ ಸರ್ಕಾರಗಳ ಮೇಲಿದೆ. ಆದರೆ ಕರಡು ಮಸೂದೆಯ ಪ್ರಕಾರ, ಈ ಬಂದರುಗಳ ಅಧಿಕಾರವು ಕೇಂದ್ರ ಸರ್ಕಾರ ರಚಿಸಿರುವ ಮೇಲ್ಮನವಿ ನ್ಯಾಯಮಂಡಳಿಗೆ ಹೋಗುತ್ತದೆ. ಈ ಕುರಿತು ಮಸೂದೆಯನ್ನು ಸಂಪೂರ್ಣ ಪರಿಶೀಲಿಸಿದ ನಂತರ ತಮಿಳುನಾಡು ಸರ್ಕಾರ ತನ್ನ ಅಭಿಪ್ರಾಯ ಕಳುಹಿಸಲಿದೆ ಎಂದಿದ್ದಾರೆ.
ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ 2021ರ ಇಂಡಿಯನ್ ಪೋರ್ಟ್ಸ್ ಮಸೂದೆಯನ್ನು ವಿರೋಧಿಸಲು 8 ಕರಾವಳಿ ರಾಜ್ಯಗಳು ಮತ್ತು ಪುದುಚೇರಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒತ್ತಾಯಿಸಿದರು. ಗುಜರಾತ್, ಗೋವಾ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ, ಸ್ಟಾಲಿನ್ ಅವರು ರಾಜ್ಯಗಳ ಅಧಿಕಾರವನ್ನು ದುರ್ಬಲಗೊಳಿಸುವ ಕ್ರಮಗಳನ್ನು ಪರಿಶೀಲಿಸುವ ಬಗ್ಗೆ ಪ್ರಸ್ತಾಪಿಸಿದ್ದರು.
ಇದನ್ನೂ ಓದಿ:ಕೋವ್ಯಾಕ್ಸಿನ್ಗೆ ಜಾಗತಿಕ ಮಾನ್ಯತೆ ಕೊಡಿಸಿ; ಪ್ರಧಾನಿಗೆ ಮಮತಾ ಪತ್ರ