ಚೆನ್ನೈ(ತಮಿಳುನಾಡು): ತಮಿಳುನಾಡು ಸರ್ಕಾರವು ತನ್ನ ಪೂರ್ವಾನುಮತಿ ಇಲ್ಲದೇ ರಾಜ್ಯದಲ್ಲಿ ವಿವಿಧ ಪ್ರಕರಣಗಳ ತನಿಖೆ ನಡೆಸುವ ಮುನ್ನ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಿಂದೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿದೆ. ರಾಜ್ಯ ಸರ್ಕಾರವು ಸಿಬಿಐಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಈಗಾಗಲೇ ಪಶ್ಚಿಮ ಬಂಗಾಳ, ರಾಜಸ್ಥಾನ, ಕೇರಳ, ಮಿಜೋರಾಂ, ಪಂಜಾಬ್ ಮತ್ತು ತೆಲಂಗಾಣ ರಾಜ್ಯಗಳು ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಈಗಾಗಲೇ ಹಿಂಪಡೆದಿವೆ ಎಂದು ಪ್ರಕಟಣೆಯಲ್ಲಿ ರಾಜ್ಯ ಸರ್ಕಾರವೂ ಸಮರ್ಥನೆ ಮಾಡಿಕೊಂಡಿದೆ.
ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ ಸಾಮಾನ್ಯ ಸಮ್ಮತಿಯನ್ನು ತಮಿಳುನಾಡು ಸರ್ಕಾರ ಹಿಂಪಡೆದಿದ್ದು, ರಾಜ್ಯದಲ್ಲಿ ಯಾವುದೇ ತನಿಖೆ ನಡೆಸುವ ಮುನ್ನ ಕೇಂದ್ರ ಸಂಸ್ಥೆ ಸಿಬಿಐ ತಮಿಳುನಾಡು ಸರ್ಕಾರದಿಂದ ಅನುಮತಿ ಪಡೆಯಲೇಬೇಕು. ಇದನ್ನು ಈಗಾಗಲೇ ಪಶ್ಚಿಮ ಬಂಗಾಳ, ರಾಜಸ್ಥಾನ, ಕೇರಳ, ಮಿಜೋರಾಂ ಪಂಜಾಬ್ ಮತ್ತು ತೆಲಂಗಾಣ ಸರ್ಕಾರಗಳು ಜಾರಿ ಮಾಡಿವೆ ಎಂದು ತಮಿಳುನಾಡು ಗೃಹ ಇಲಾಖೆ ತಿಳಿಸಿದೆ. ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946 ರ ಸೆಕ್ಷನ್ 6 ರ ಪ್ರಕಾರ, ರಾಜ್ಯದಲ್ಲಿ ಯಾವುದೇ ಪ್ರಕರಣವನ್ನು ತನಿಖೆ ಮಾಡುವ ಮೊದಲು ಸಿಬಿಐ ಆಯಾ ರಾಜ್ಯದಿಂದ ಅನುಮತಿ ಪಡೆಯಬೇಕು ಎಂಬ ನಿಯಮವಿದೆ.
ಬಿಜೆಪಿ ವಿರುದ್ಧ ಸ್ಟಾಲಿನ್ ವಾಗ್ದಾಳಿ:ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಬುಧವಾರ ಬಂಧಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂಥ ಬೆದರಿಕೆ ತಂತ್ರಗಳಿಗೆ ಡಿಎಂಕೆ ಹೆದರುವುದಿಲ್ಲ. ಇದಕ್ಕೆ ಕಾನೂನಾತ್ಮಕವಾಗಿ ತಕ್ಕ ಉತ್ತರ ನೀಡಲಾಗುವುದು ಎಂದು ಕಿಡಿಕಾರಿದ್ದಾರೆ.