ಮಧುರೈ:ಕೆಲವು ಅಭ್ಯರ್ಥಿಗಳು ಮತದಾರರ ಒಲವು ಗಳಿಸಲು ಮಹಿಳೆಯರ ಬಟ್ಟೆ ಒಗೆಯುವ ಮತ್ತು ರಸ್ತೆಬದಿಯಲ್ಲಿ ಚಹಾ ತಯಾರಿಸುವ ಕೆಲಸವನ್ನು ಸಹ ಮಾಡಿದ್ದಾರೆ. ಕೆಲ ಪಕ್ಷಗಳು ಮತದಾರರಿಗೆ ಚಿನ್ನಾಭರಣ, ಜಾನುವಾರು, ಮೊಬೈಲ್ ಫೋನ್, ಟಿವಿ, ಫ್ಯಾನ್, ಮಿಕ್ಸರ್, ವಾಷಿಂಗ್ ಮಷಿನ್, ಎಲ್ಪಿಜಿ ಸಿಲಿಂಡರ್ ಮತ್ತು ಸೋಲಾರ್ ಕುಕ್ ಟಾಪ್ಸ್ ನೀಡುವ ಭರವಸೆ ನೀಡಿವೆ. ಆದರೆ ಮಧುರೈ ದಕ್ಷಿಣ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯೊಬ್ಬರು ಭರವಸೆಯ ವಿಷಯದಲ್ಲಿ ಎಲ್ಲರನ್ನೂ ಹಿಂದೆ ತಳ್ಳಿದ್ದಾರೆ. ಮತದಾರರನ್ನು ಸೆಳೆಯಲು ಆ ಅಭ್ಯರ್ಥಿ ಚಂದ್ರನ ಮೇಲೆ ರಜಾದಿನ ಎಂಜಾಯ್ ಮಾಡಿಸುವುದಾಗಿ ಅದ್ಭುತವಾದ ಭರವಸೆ ನೀಡಿದ್ದಾರೆ.
ಸ್ವತಂತ್ರ ಅಭ್ಯರ್ಥಿಯ 35 ಭರವಸೆಗಳು...
ಮಧುರೈ ಸೌತ್‌ನ ಸ್ವತಂತ್ರ ಅಭ್ಯರ್ಥಿ ತುಲಂ ಸರವಣನ್ ಮತದಾರರಿಗೆ 35 ಭರವಸೆಗಳನ್ನು ನೀಡಿದ್ದಾರೆ. ಹೆಲಿಕಾಪ್ಟರ್‌ಗಳು, ಐಫೋನ್‌ಗಳು, ಮೂರು ಅಂತಸ್ತಿನ ಮನೆಗಳನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಮೂರು ಅಂತಸ್ತಿನ ಮನೆಗಳಲ್ಲಿ ಈಜುಕೊಳದ ಸೌಲಭ್ಯವೂ ಇರುತ್ತಂತೆ. ಸ್ವತಂತ್ರ ಅಭ್ಯರ್ಥಿ ಮತದಾರರಿಗೆ ಪ್ರತಿ ವರ್ಷ 1 ಕೋಟಿ ರೂಪಾಯಿಗಳನ್ನು ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಯನ್ನು ರಜಾ ದಿನಗಳನ್ನು ಕಳೆಯಲು ಚಂದ್ರನ ಮೇಲೆ ಕಳುಹಿಸುವುದಾಗಿಯೂ ಹೇಳಿದ್ದಾರೆ.