ಕುಂಬಕೋಣಂ (ತಮಿಳುನಾಡು):ನಗರದಲ್ಲಿ ಮರ್ಯಾದಾ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಸಹೋದರನೊಬ್ಬ ತಮ್ಮ ತಂಗಿ ಮತ್ತು ಭಾವನನ್ನು ಮನೆಗೆ ಕರೆಸಿ, ಊಟ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ಕಂಡು ಬಂದಿದೆ.
24 ವರ್ಷದ ಶರಣ್ಯ ಕುಂಭಕೋಣಂ ಸಮೀಪದ ತುಳುಕ್ಕವೇಲಿ ಗ್ರಾಮದ ನಿವಾಸಿಯಾಗಿದ್ದು, ಚೆನ್ನೈನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ತಿರುವಣ್ಣಾಮಲೈ ಸಮೀಪದ ಪೊನ್ನೂರಿನ 31 ವರ್ಷದ ಮೋಹನ್ ಎಂಬಾತ ಐದು ತಿಂಗಳ ಹಿಂದೆ ಶರಣ್ಯಳನ್ನು ಚೆನ್ನೈನಲ್ಲಿ ಭೇಟಿಯಾಗಿದ್ದನು. ಇವರ ಮಧ್ಯೆ ಸ್ನೇಹ ಬೆಳದಿದೆ. ನಂತರ ಆ ಸ್ನೇಹ ಪ್ರೀತಿಗೆ ತಿರುಗಿದೆ.
ಆದರೆ, ಶರಣ್ಯಳ ಸಹೋದರ ಶಕ್ತಿವೇಲ್ಗೆ ಇವರ ಪ್ರೇಮ ವಿಚಾರ ಗೊತ್ತಾಗಿದೆ. ಅಷ್ಟೇ ಅಲ್ಲ ಶರಣ್ಯ ತನ್ನ ಸೋದರ ಮಾವ ರಂಜಿತ್ನನ್ನು ವರಿಸಬೇಕೆಂಬುದು ಶಕ್ತಿವೇಲ್ ಆಸೆಯಾಗಿತ್ತು. ಈ ಬಗ್ಗೆ ಶರಣ್ಯಳಿಗೆ ಶಕ್ತಿವೇಲ್ ತಿಳಿಸಿದ್ದಾನೆ. ಆದರೆ, ಇದಕ್ಕೆ ಶರಣ್ಯ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಓದಿ:ಪ್ರೀತಿಯ ಮೇಲೆ ಹಗೆ; ನಡುರಸ್ತೆಯಲ್ಲೇ ನಡೀತು ಯುವಕನ ಬರ್ಬರ ಹತ್ಯೆ
ಅಣ್ಣನ ಆಸೆ ತಿಳಿದು ಗಾಬರಿಗೊಂಡ ಶರಣ್ಯ ಕಳೆದ ವಾರ ಚೆನ್ನೈನಲ್ಲಿ ಮೋಹನ್ ಅನ್ನು ವರಿಸಿದ್ದಾರೆ. ನಂತರ ಫೋನ್ ಮೂಲಕ ತನ್ನ ಕುಟುಂಬಕ್ಕೆ ಮಾಹಿತಿ ತಿಳಿಸಿದ್ದಳು. ಇದನ್ನು ಕೇಳಿದ ಸಹೋದರ ಶಕ್ತಿವೇಲ್ ಅವರಿಬ್ಬರ ಕೊಲೆಗೆ ಯೋಜನೆ ರೂಪಿಸಿ ದಂಪತಿ ಮನೆಗೆ ಕರೆದಿದ್ದಾನೆ.
ನವದಂಪತಿ ನಿನ್ನೆ ತುಳುಕ್ಕವೇಲಿಗೆ ಆಗಮಿಸಿ ಶಕ್ತಿವೇಲ್ ಮನೆಯಲ್ಲಿ ಊಟ ಮಾಡಿ, ಶರಣ್ಯ ಮತ್ತು ಮೋಹನ್ ಚೆನ್ನೈಗೆ ಮರಳಲು ತಯಾರಾಗುತ್ತಿದ್ದರು. ಈ ವೇಳೆ, ಮೋಹನ್ ಮತ್ತು ಶರಣ್ಯ ಮೇಲೆ ಶಕ್ತಿವೇಲ್ ಚೂಪಾದ ಆಯುಧದಿಂದ ಹಲ್ಲೆ ಮಾಡಿ ಕತ್ತು ಕೊಯ್ದಿದ್ದಾನೆ. ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಹೋದರ ಶಕ್ತಿವೇಲ್ ಸೇರಿದಂತೆ ಮತ್ತೊಬ್ಬ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಶರಣ್ಯ ಎಸ್‌ಸಿ ಸಮುದಾಯಕ್ಕೆ ಸೇರಿದವರು ಮತ್ತು ಮೋಹನ್ ಮುದಲಿಯಾರ್ (ಬಿಸಿ) ಸಮುದಾಯದವರು. ಆದರೆ, ಇಲ್ಲಿ ಜಾತಿ ಬಗ್ಗೆ ಪ್ರಶ್ನೆ ಉದ್ಭವವಾಗಿಲ್ಲ. ಕೊಲೆ ಬಗ್ಗೆ ನಿಖರ ಕಾರಣ ತಿಳಿದು ಬರಬೇಕು. ಘಟನಾ ಸ್ಥಳಕ್ಕೆ ತಂಜಾವೂರು ಎಸ್ಪಿ ಜಿ.ರವಳಿ ಪ್ರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತ ದೇಹಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ತನಿಖೆ ಮುಂದುವರಿಸಿದ್ದಾರೆ.