ಚೆನ್ನೈ(ತಮಿಳುನಾಡು): ಆಸ್ತಿಪಾಸ್ತಿ, ಪ್ರಾಣ ಹಾನಿಗೆ ಕಾರಣವಾಗಿರುವ ಆನ್‌ಲೈನ್ ರಮ್ಮಿ, ಪೋಕರ್ ಗೇಮ್ಗಳನ್ನು ತಮಿಳುನಾಡಿನಲ್ಲಿ ಮತ್ತೆ ನಿಷೇಧಿಸಲಾಗಿದೆ. ಸ್ಟಾಲಿನ್ ಸರ್ಕಾರ ಅಧಿಸೂಚನೆ ಹೊರಡಿಸಿ ಗೇಮ್ ಅನ್ನು ರಾಜ್ಯದಲ್ಲಿ ಬ್ಯಾನ್ ಮಾಡಿದೆ.
ಈ ಹಿಂದೆಯೂ ಕೂಡ 2020 ರಲ್ಲಿ ಗೇಮ್ ಅನ್ನು ನಿಷೇಧಿಸಲಾಗಿತ್ತು. ಇದರ ವಿರುದ್ಧ ಕಂಪನಿಗಳು ಕೋರ್ಟ್ ಮೆಟ್ಟಿಲೇರಿದ್ದವು. ಕೋರ್ಟ್ ಕೂಡ ನಿಷೇಧವನ್ನು ತೆರವು ಮಾಡಿತ್ತು. ಇದೀಗ ಸರ್ಕಾರ ಕಾನೂನುಬದ್ಧವಾಗಿಯೇ ಜನರ ಜೀವ, ಜೀವದ ಜೊತೆ ಆಟವಾಡುವ ಗೇಮ್ಗಳನ್ನು ಶಾಶ್ವತವಾಗಿ ರದ್ದಿಗೆ ಮುಂದಾಗಿದೆ.
ಅಧಿಸೂಚನೆಯಲ್ಲಿ ಆನ್‌ಲೈನ್ ಬೆಟ್ಟಿಂಗ್ಗಳನ್ನು ಹೊರತುಪಡಿಸಿ ಆನ್‌ಲೈನ್ ಗೇಮ್ಗಳನ್ನು ಮಾತ್ರ ನಿಷೇಧಿಸಿದೆ. ಇವುಗಳ ನಿಯಂತ್ರಣಕ್ಕಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಆಯೋಗವನ್ನು ರಚಿಸಲು ಸರ್ಕಾರಿ ಯೋಜಿಸಿದ್ದು, ಇದರಲ್ಲಿ ಐಟಿ ತಜ್ಞರು, ಮಾನಸಿಕ ತಜ್ಞರು ಮತ್ತು ಆನ್‌ಲೈನ್ ಗೇಮರ್ಗಳು ಸದಸ್ಯರಾಗಿರುತ್ತಾರೆ. ಮುಂಬರುವ ದಿನಗಳಲ್ಲಿ ಆನ್‌ಲೈನ್ ಆಟಗಳಿಗೆ ಅನುಮತಿ ನೀಡಬೇಕಾದರೆ, ಈ ಆಯೋಗ ಮೇಲ್ವಿಚಾರಣೆ ನಡೆಸುತ್ತದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.