ಕರ್ನಾಟಕ

karnataka

ETV Bharat / bharat

ತಮಿಳುನಾಡು ರಾಜ್ಯಪಾಲರು ವಿಧೇಯಕಗಳನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಿರುವುದು ಕಳವಳಕಾರಿ': ಸುಪ್ರೀಂ ಕೋರ್ಟ್ - ಈಟಿವಿ ಭಾರತ್ ಕನ್ನಡ ಸುದ್ದಿ

ತಮಿಳುನಾಡು ರಾಜ್ಯಪಾಲರು ವಿಧಾನಸಭೆಗಳಲ್ಲಿ ಅಂಗೀಕಾರವಾದ ಮಸೂದೆಗಳಿಗೆ ಅನುಮೋದನೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್​ ತರಾಟೆಗೆ ತೆಗೆದುಕೊಂಡಿದೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

By ETV Bharat Karnataka Team

Published : Nov 10, 2023, 10:58 PM IST

ತಮಿಳುನಾಡು:ವಿಧಾನಸಭೆಗಳಲ್ಲಿ ಅಂಗೀಕಾರವಾದ ಮಸೂದೆಗಳಿಗೆ ಅನುಮೋದನೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪದ ಕುರಿತಂತೆ ತಮಿಳುನಾಡು ರಾಜ್ಯದ ರಾಜ್ಯಪಾಲರನ್ನು ಸುಪ್ರೀಂಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ರಾಜ್ಯಪಾಲರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ತಮಿಳುನಾಡು ಸರ್ಕಾರ ಆರೋಪಿಸಿತ್ತು.

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ, ಚುನಾಯಿತ ವಿಧಾನಸಭೆಯಿಂದ ಅಂಗೀಕರಿಸಲ್ಪಟ್ಟ ಮಸೂದೆಗಳನ್ನು ವಿಳಂಬ ಮಾಡದಂತೆ ಎರಡೂ ರಾಜ್ಯಪಾಲರನ್ನು ಒತ್ತಾಯಿಸಿದೆ. ದಯವಿಟ್ಟು ಚುನಾಯಿತ ಸಭೆಯು ಅಂಗೀಕರಿಸಿದ ಮಸೂದೆಗಳ ಹಾದಿಯನ್ನು ಬದಲಿಸಬೇಡಿ. ಇದು ಅತ್ಯಂತ ಗಂಭೀರ ಮತ್ತು ಕಾಳಜಿಯ ವಿಷಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿ ಮಸೂದೆಗಳನ್ನು ವಿಳಂಬ ಮಾಡುವುದು ಸರಿಯಲ್ಲ. ರಾಜ್ಯಪಾಲರು ಇದನ್ನು ಏನೆಂದು ಹೇಳುತ್ತಾರೆ? ಪಂಜಾಬ್‌ ಮತ್ತು ತಮಿಳುನಾಡಿನಲ್ಲಿ ನಡೆಯುತ್ತಿರುವುದರ ಬಗ್ಗೆ ನಮಗೆ ತೃಪ್ತಿಯಿಲ್ಲ. ನಾವು ಸಂಸದೀಯ ಪ್ರಜಾಪ್ರಭುತ್ವವಾಗಿ ಮುಂದುವರಿಯುತ್ತಿದ್ದೇವೆಯೇ? ಎಂಬ ಅನುಮಾನ ಮೂಡುತ್ತಿದೆ. ಭಾರತವು ಸ್ಥಾಪಿತ ಸಂಪ್ರದಾಯಗಳು ಮತ್ತು ವಿವಿಧತೆ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅವುಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಪೀಠವು ಒತ್ತಿ ಹೇಳಿದೆ.

ಅನುಮೋದನೆಗಾಗಿ ಕಳುಹಿಸಿದ ವಿಧೇಯಕಗಳಿಗೆ ಅಂಕಿತ ಹಾಕದೆ ಉದ್ದೇಶಪೂರ್ವಕವಾಗಿ ತಡ ಮಾಡುವ ಮೂಲಕ ರಾಜ್ಯಪಾಲರು ಜನರ ಇಚ್ಛೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ತಮಿಳುನಾಡು ಆರೋಪಿಸಿತ್ತು. ಅಲ್ಲದೇ ಸಾಂವಿಧಾನಿಕ ಪ್ರಾಧಿಕಾರವು ನಿರಂತರವಾಗಿ ಅಸಂವಿಧಾನಿಕ ರೀತಿಯಲ್ಲಿ ಬಾಹ್ಯ ಕಾರಣಗಳಿಗಾಗಿ ರಾಜ್ಯ ಸರ್ಕಾರದ ಕಾರ್ಯಚಟುವಟಿಕೆಗೆ ಅಡ್ಡಿಯುಂಟುಮಾಡುತ್ತದೆ ಎಂದು ಆರೋಪಿಸಿ ಮಧ್ಯಪ್ರವೇಶಿಸುವಂತೆ ಸರ್ಕಾರವು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿತ್ತು.

ಕಳೆದ ಕೆಲವು ತಿಂಗಳಿನಿಂದ ತಮಿಳುನಾಡಿನ ಡಿಎಂಕೆ ಸರ್ಕಾರ ಹಾಗೂ ರಾಜ್ಯಪಾಲ ಆರ್‌ಎನ್ ರವಿ ನಡುವೆ ತೀವ್ರ ಗುದ್ದಾಟ ನಡೆಯುತ್ತಿದೆ. ವಿಧೇಯಕ ವಿಚಾರ ಮಾತ್ರವಲ್ಲದೆ, ಅನೇಕ ನೀತಿ ನಿರೂಪಣೆ, ಸರ್ಕಾರದ ಆದೇಶಗಳಿಗೆ ಆರ್‌ಎನ್ ರವಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ತಮಿಳುನಾಡು ಆರೋಪಿಸಿತ್ತು. ಪಂಜಾಬ್‌ನಿಂದ ತಮಿಳುನಾಡಿನವರೆಗೂ ಈ ಕಾಯಿಲೆ ವ್ಯಾಪಿಸಿದ್ದು, ಇದನ್ನು ಪರಿಹರಿಸುವ ಅಗತ್ಯವಿದೆ ಎಂದು ವಕೀಲ ಸಿಂಘ್ವಿ ಹೇಳಿದರು. ಕಡತ ತಮಗೆ ತಲುಪುವ ಮುನ್ನವೇ ರಾಜ್ಯಪಾಲರು ವಿಧೇಯಕಗಳ ಕುರಿತಾದ ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಕೋರ್ಟ್ ಹೇಳಿದೆ.

ಇದೇ ರೀತಿ ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಂಜಾಬ್ ಸರ್ಕಾರ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ:ದಿವಾಳಿ ಮತ್ತು ದಿವಾಳಿತನ ಸಂಹಿತೆಯ ಪ್ರಮುಖ ನಿಬಂಧನೆಗಳ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್​

ABOUT THE AUTHOR

...view details