ಚೆನ್ನೈ (ತಮಿಳುನಾಡು):ಜೈಲಿನಲ್ಲಿರುವ ಡಿಎಂಕೆ ನಾಯಕ ಹಾಗೂ ರಾಜ್ಯ ಸಚಿವ ವಿ ಸೆಂಥಿಲ್ ಬಾಲಾಜಿ ಅವರ ವಜಾ ಆದೇಶವನ್ನು ಸದ್ಯಕ್ಕೆ ಹಿಂಪಡೆಯಲು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ನಿರ್ಧರಿಸಿದ್ದಾರೆ. "ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯಪಾಲ ಆರ್ ಎನ್ ರವಿ ಹಿಂಪಡೆದಿದ್ದಾರೆ. ಈ ಕುರಿತು ಅಟಾರ್ನಿ ಜನರಲ್ ಅವರ ಸಲಹೆಯನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾಗಿ" ಮೂಲಗಳು ತಿಳಿಸಿವೆ.
"ಜಾರಿ ನಿರ್ದೇಶನಾಲಯ (ಇಡಿ) ದಿಂದ ಬಂಧನಕ್ಕೊಳಗಾದ ಸಚಿವ ವಿ ಸೆಂಥಿಲ್ ಬಾಲಾಜಿ ಅವರು ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಹೀಗಾಗಿ, ರಾಜ್ಯಪಾಲರು ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ" ಎಂದು ರಾಜಭವನವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ :ತಮಿಳುನಾಡಿನಲ್ಲಿ ಮಹತ್ವದ ಬೆಳವಣಿಗೆ : ಸಚಿವ ಸಂಪುಟದಿಂದ ಸೆಂಥಿಲ್ ಬಾಲಾಜಿ ವಜಾಗೊಳಿಸಿದ ರಾಜ್ಯಪಾಲ!
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, "ರಾಜ್ಯಪಾಲರ ನಿರ್ಧಾರವನ್ನು ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಪ್ರಶ್ನಿಸಲಿದೆ. ರಾಜ್ಯಪಾಲರಿಗೆ (ಹಾಲಿ ಸಚಿವರನ್ನು ವಜಾ ಮಾಡುವ) ಹಕ್ಕಿಲ್ಲ. ಮತ್ತು ನಾವು ಇದನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ " ಎಂದು ಹೇಳಿದ್ದರು. ಹಾಗೆಯೇ, ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಕೂಡ ಜೈಲುಪಾಲಾದ ಸಚಿವರ ವಜಾಗೊಳಿಸುವಿಕೆಯನ್ನು ಟೀಕಿಸಿದ್ದರು.
ಇದನ್ನೂ ಓದಿ :ಸಿಬಿಐ ತನಿಖೆಗೂ ಮುನ್ನ ತಮಿಳುನಾಡು ಸರ್ಕಾರದ ಅನುಮತಿ ಕಡ್ಡಾಯ : ಸಿಎಂ ಸ್ಟಾಲಿನ್
ಉದ್ಯೋಗಕ್ಕಾಗಿ ಲಂಚ ಪಡೆದ ಪ್ರಕರಣ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜೂನ್ 14 ರಂದು ಜಾರಿ ನಿರ್ದೇಶನಾಲಯವು ವಿದ್ಯುತ್, ಅಬಕಾರಿ ಖಾತೆಯನ್ನು ಹೊಂದಿದ್ದ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಿತ್ತು. ನಂತರ, ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 15 ರಂದು ಮದ್ರಾಸ್ ಹೈಕೋರ್ಟ್ ಅವರನ್ನು ಅವರ ಆಯ್ಕೆಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಿತ್ತು. ಬಾಲಾಜಿ ಬಂಧನದ ಬಳಿಕ, ಸ್ಟಾಲಿನ್ ಅವರು ಯಾವುದೇ ಖಾತೆಯನ್ನು ನೀಡದೆ ಸಂಪುಟದಲ್ಲಿ ಉಳಿಸಿದ್ದರು. ಇದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದೀಗ, ಜೈಲಿನಲ್ಲಿರುವ ಸಚಿವ ಸೆಂಥಿಲ್ ಬಾಲಾಜಿ ಅವರ ವಜಾ ಅದೇಶವನ್ನು ರಾಜ್ಯಪಾಲರು ತಡೆಹಿಡಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ :ED Raid : 10 ಸಾವಿರ ಕೋಟಿ ಹವಾಲ ವ್ಯವಹಾರದಶಂಕೆ.. 20ಕ್ಕೂ ಹೆಚ್ಚು ಕಡೆ ಇಡಿ ದಾಳಿ