ತಮಿಳುನಾಡು ಪಡಿತರ ಅಂಗಡಿಗಳಲ್ಲಿ ಟೊಮೆಮೊ ಮಾರಾಟ ಚೆನ್ನೈ:ದೇಶಾದ್ಯಂತ ಭಾರಿ ಬೆಲೆ ಕಂಡಿರುವ ಟೊಮೆಟೊ ಸದ್ಯಕ್ಕೆ 'ತರಕಾರಿಗಳ ರಾಜ'ನಾಗಿದೆ. ಪ್ರತಿ ಕೆಜಿಗೆ ಗರಿಷ್ಠ 150 ರಿಂದ 160 ರೂಪಾಯಿವರೆಗೆ ಬಿಕರಿಯಾಗುತ್ತಿದೆ. ಬೆಲೆ ಗಗನಕ್ಕೇರಿ ಜನರ ಕೈ ಸುಡುತ್ತಿರುವ ಟೊಮೆಟೊವನ್ನು ತಮಿಳುನಾಡು ಸರ್ಕಾರ ಪಡಿತರ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಗ್ರಾಹಕರಿಗೆ 60 ರೂಪಾಯಿಗೆ ಕೆಜಿ ಟೊಮೆಟೊ ಸಿಗುತ್ತಿದೆ.
ಸೋಮವಾರಷ್ಟೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಸಹಕಾರಿ ಸಚಿವ ಪೆರಿಯಗರುಪ್ಪನ್, ಪಡಿತರ ಅಂಗಡಿಗಳಲ್ಲಿ ಕಡಿಮೆ ಬೆಲೆಗೆ ಟೊಮೆಟೊ ಸಿಗಲಿದೆ. ಇದಕ್ಕಾಗಿ ಎಲ್ಲ ಅಂಗಡಿಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದರು. ಅದರಂತೆ ಬುಧವಾರದಿಂದ ಪಡಿತರ ಧಾನ್ಯಗಳ ಜೊತೆಗೆ ಕೆಂಪು ತರಕಾರಿ ಕೂಡ ಲಭ್ಯವಿದೆ.
ಚೆನ್ನೈ ನಗರದ ಪಾಂಡಿ ಬಜಾರ್‌ನಲ್ಲಿರುವ ಪಡಿತರ ಅಂಗಡಿಯಲ್ಲಿ ಮಾಲೀಕ ಧಾನ್ಯಗಳ ಜೊತೆಗೆ ಟೊಮೆಟೊವನ್ನೂ ಗ್ರಾಹಕರಿಗೆ ವಿತರಿಸುತ್ತಿರುವುದು ಕಂಡುಬಂತು. ಪ್ರತಿ ಕೆಜಿಗೆ 60 ರೂಪಾಯಿ ಎಂಬ ಬೋರ್ಡ್ ಕೂಡ ನೇತು ಹಾಕಲಾಗಿದೆ. ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಕೆಜಿಗೆ 100 ರಿಂದ 130 ರೂಪಾಯಿ ಇದ್ದು, ಅದರ ಅರ್ಧ ದರದಲ್ಲಿ ಸರ್ಕಾರವೇ ಮಾರಾಟ ಮಾಡುತ್ತಿದೆ. ಇದು ಜನರಿಗೆ ಸಂತಸ ತಂದಿದೆ. ಸರ್ಕಾರದ ಜನಪರ ಕಾಳಜಿಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಎಲ್ಲೆಲ್ಲಿ ಮಾರಾಟ?:ಪಡಿತರ ಅಂಗಡಿ, ಕೃಷಿ ಹಸಿರು ಕೇಂದ್ರ (ಸಹಕಾರಿ ಸಂಘದ ಅಂಗಡಿ) ಸೇರಿದಂತೆ 111 ಕೇಂದ್ರಗಳಲ್ಲಿ ಟೊಮೆಟೊ ಮಾರಾಟ ಮಾಡಲಾಗುತ್ತಿದೆ. ಸೆಂಟ್ರಲ್ ಚೆನ್ನೈನಲ್ಲಿ 32, ಉತ್ತರ ಚೆನ್ನೈನಲ್ಲಿ 25, ದಕ್ಷಿಣ ಚೆನ್ನೈನಲ್ಲಿ 25 ಸೇರಿದಂತೆ ಒಟ್ಟು 82 ಪಡಿತರ ಅಂಗಡಿಗಳಲ್ಲಿ ಟೊಮೆಟೊವನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಪೆಟ್ರೋಲ್ಗಿಂತ ದುಬಾರಿ:ಇನ್ನು, ಜಾರ್ಖಂಡ್ನಲ್ಲೂ ಟೊಮೆಟೊ ಬೆಲೆ ಗಗನಮುಖಿಯಾಗಿದೆ. ಖರೀದಿಗೆ ಬಂದ ಗ್ರಾಹಕರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, "ಎಲ್ಲೆಡೆ ಟೊಮೆಟೊ ಬೆಲೆ ಹೆಚ್ಚಾಗಿದೆ. ಪೆಟ್ರೋಲ್ ತರಕಾರಿ ದುಬಾರಿಯಾಗಿದೆ. ನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಅತ್ಯಂತ ಕಷ್ಟಕರವಾಗಿದೆ" ಎಂದು ಅಲವತ್ತುಕೊಂಡರು. ಕೋಲ್ಕತ್ತಾದಲ್ಲಿ ಪ್ರತಿ ಕೆಜಿ ಟೊಮೆಟೊ 148 ರೂ., ಮುಂಬೈಯಲ್ಲಿ 58, ದೆಹಲಿಯಲ್ಲಿ 110 ರೂಪಾಯಿಯಂತೆ ಮಾರಾಟವಾಗುತ್ತಿದೆ.
ಹಿಮಾಚಲಪ್ರದೇಶದಲ್ಲಿ ಸೇಬಿಗಿಂತಲೂ ಟೊಮೆಟೊ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಸೇಬು ಕೆಜಿಗೆ 80 ರಿಂದ 90 ರೂಪಾಯಿ ಇದ್ದರೆ, ಟೊಮೆಟೊ 100 ರೂಪಾಯಿಗಿಂತ ಹೆಚ್ಚಾಗಿದೆ. ಪ್ರತಿ ಕ್ರೇಟ್ಗೆ 2300 ರೂಪಾಯಿ ಬೆಲೆ ಸಿಗುತ್ತಿದೆ. ಇದು ರೈತರಿಗೆ ವರದಾನವಾಗಿದ್ದರೆ, ಗ್ರಾಹಕರಿಗೆ ಬರೆ ಎಳೆದಿದೆ.
ಇದನ್ನೂ ಓದಿ:ನಾಳೆಯಿಂದ ಚೆನ್ನೈನ ಪಡಿತರ ಅಂಗಡಿಗಳಲ್ಲಿ ಟೊಮೆಟೊ ಮಾರಾಟ: ಸಚಿವ ಪೆರಿಯಕರುಪ್ಪನ್