ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ತಮಿಳುನಾಡು ರೈತ ಧರ್ಮಪುರಿ (ತಮಿಳುನಾಡು): ನೆರೆಹೊರೆಯವರು ಮನೆಗೆ ತೆರಳಲು ಅಡ್ಡಿಪಡಿಸಿದ್ದರಿಂದ ಬೇಸತ್ತು ಹೆಲಿಕಾಪ್ಟರ್‌ನಲ್ಲಿ ಮನೆಗೆ ತೆರಳಲು ಅನುಮತಿ ನೀಡುವಂತೆ ಕೋರಿ ರೈತರೊಬ್ಬರು ಸೋಮವಾರ ಧರ್ಮಪುರಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.
ಧರ್ಮಪುರಿ ಜಿಲ್ಲೆಯ ಅಗ್ರಹಾರಂನ ರೈತ ಗಣೇಶನ್ (57) ಎಂಬುವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆತೆರಳಿದ್ದರು. ಒಬ್ಬರು ಆಟಿಕೆ ಹೆಲಿಕಾಪ್ಟರ್ ಮತ್ತು ಇನ್ನೊಬ್ಬರು ಹೆಲಿಕಾಪ್ಟರ್ ಚಿತ್ರವನ್ನು ಹಿಡಿದುಕೊಂಡು ವಿಭಿನ್ನವಾಗಿ ಮನವಿ ಮಾಡಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರೈತ ಗಣೇಶನ್, ‘ನನ್ನ ಮನೆಗೆ ಹೋಗಲು ವರ್ಷಗಳಿಂದ ಬಳಸುತ್ತಿದ್ದ ರಸ್ತೆಯಲ್ಲಿ ಹೋಗದಂತೆ ನನ್ನ ಮನೆ ಸಮೀಪದ ಜನರು ತಡೆದಿದ್ದಾರೆ. ಇದಲ್ಲದೆ ನಾಲ್ಕು ಕಡೆ ತಡೆಗೋಡೆ ನಿರ್ಮಿಸಿದ್ದಾರೆ. ಇದರಿಂದಾಗಿ ನಾನು, ನನ್ನ ಸ್ವಂತ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಮನೆಗೆ ಹೋಗಲು ಯಾವುದೇ ಆಯ್ಕೆಯಿಲ್ಲದೆ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ' ಎಂದು ತಮ್ಮ ನೋವನ್ನು ತೋಡಿಕೊಂಡರು.
ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ನನ್ನ ಸ್ವಂತ ಮನೆಗೆ ಹೋಗಲು ನನಗೆ ದಾರಿ ಇಲ್ಲ. ಹಾಗಾಗಿ ಹೆಲಿಕಾಪ್ಟರ್ ಮೂಲಕ ಹೋಗುವುದು ಒಂದೇ ಆಯ್ಕೆಯಾಗಿದೆ. ಜಿಲ್ಲಾಡಳಿತ ಅದಕ್ಕೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಹುತಾತ್ಮ ಯೋಧನ ಸ್ಮಾರಕಕ್ಕೂ ಸಂಚಕಾರ ಆರೋಪ.. ನೆಮ್ಮದಿ ಕಳೆದುಕೊಂಡ ಕುಟುಂಬ